ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ ಕೂಗು ಮುನ್ನೆಲೆಗೆ: ಮಠಾಧೀಶರಿಂದ ಒಕ್ಕೊರಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 23:30 IST
Last Updated 5 ಅಕ್ಟೋಬರ್ 2025, 23:30 IST
<div class="paragraphs"><p>ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಭಾನುವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು&nbsp; </p></div>

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಭಾನುವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು 

   

ಪ್ರಜಾವಾಣಿ ಚಿತ್ರ 

ಬೆಂಗಳೂರು: ‘ರಾಜ್ಯ ಸರ್ಕಾರ ಮಾಡಿರುವ ಶಿಫಾರಸು ಆಧಾರದಲ್ಲಿ ‌ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಕೇಂದ್ರ ಸರ್ಕಾರ ನೀಡಬೇಕು’ ಎನ್ನುವ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ADVERTISEMENT

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರತ್ಯೇಕ ಧರ್ಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಲಿಂಗಾಯತ ಮಠಾಧೀಶರು, ರಾಜಕೀಯ ಮುಖಂಡರು, ಸಮುದಾಯದ ಪ್ರಮುಖರು ಪ್ರಸ್ತಾಪಿಸಿದರು.

ಅಲ್ಲದೇ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಜಾಗೃತಿ ಮುಂದುವರಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು.

ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಸಿದ್ದರಾಮಯ್ಯ ಅವರ ಒತ್ತಾಸೆಯಿಂದಾಗಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರ ಈಗ ಒಪ್ಪಿಗೆ ನೀಡಬೇಕಾಗಿದೆ. ಒಂದಿಲ್ಲೊಂದು ದಿನ ಕೇಂದ್ರದಿಂದಲೂ ಅನುಮತಿ ಸಿಕ್ಕೇ ಸಿಗುತ್ತದೆ. ಯಾರಿಂದಲೂ ಇದನ್ನು ತಡೆಯಲು ಆಗುವುದಿಲ್ಲ’ ಎಂದರು.‌‌‌‌

ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಮಾತನಾಡಿ, ‘ಪ್ರತ್ಯೇಕ ಧರ್ಮ ಮಾನ್ಯತೆಯ ಪ್ರಯತ್ನ ಮುಂದುವರಿದಿದೆ. ಈಗ ನಮ್ಮಲ್ಲಿ ಸಾವಿರಕ್ಕೂ ಹೆಚ್ಚು ಮಠಗಳು ಸಕ್ರಿಯವಾಗಿವೆ. ಆದರೂ 300ಕ್ಕೂ ಹೆಚ್ಚು ವಿರಕ್ತಮಠಗಳು ನಮ್ಮಿಂದ ಹೊರಗಿವೆ. ತಕರಾರು ಮಾಡದೇ ಅವರೂ ಲಿಂಗಾಯತ ಧರ್ಮದ ಭಾಗ ಆಗಬೇಕು’ ಎಂದು ಸಲಹೆ ನೀಡಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನದಾಸ್‌ ಮಾತನಾಡಿ, ‘ಬಸವ ತತ್ವವೇ ಬೇರೆ, ಧರ್ಮವೇ ಬೇರೆ, ಬಸವ ಧರ್ಮವು ಇಂದು ಇಡೀ ಪ್ರಪಂಚಕ್ಕೆ ಬೇಕಾಗಿದೆ. ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಯಬೇಕು’ ಎಂದು ನುಡಿದರು.

ಸಚಿವ ಎಂ.ಬಿ. ಪಾಟೀಲ, ‘ಲಿಂಗಾಯತರು ಯಾರ ವಿರೋಧಿಗಳೂ ಅಲ್ಲ. ಭೌಗೋಳಿಕವಾಗಿ ನಾವು ಹಿಂದೂಗಳೇ ಆಗಿದ್ದೇವೆ. ಆದರೆ, ಧರ್ಮದಿಂದ ಲಿಂಗಾಯತರು. ಲಿಂಗಾಯತ ಧರ್ಮ ಹೆಚ್ಚುಚ್ಚು ಪ್ರಸಾರವಾಗಿ, ಬಸವ ಭಾರತವಾಗಬೇಕು’ ಎಂದು ತಿಳಿಸಿದರು.

ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರದ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಪ್ರತ್ಯೇಕ ಧರ್ಮದ ಮಾನ್ಯತೆಗೆ ನಿರಂತರವಾಗಿ ಜಾಗೃತಿ ಮುಂದುವರಿಸಬೇಕು ಎನ್ನುವುದೂ ಸೇರಿ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಮುಂದಿನ ವರ್ಷ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು
ಸಿದ್ದರಾಮಯ್ಯ ಮುಖ್ಯಮಂತ್ರಿ

‘ಮೆಟ್ರೊಕ್ಕೆ ಬಸವೇಶ್ವರ ಹೆಸರು: ಕೇಂದ್ರಕ್ಕೆ ಪ್ರಸ್ತಾವ’

ನಮ್ಮ ಮೆಟ್ರೊಕ್ಕೆ ಬಸವೇಶ್ವರರ ಹೆಸರಿಡುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ನಮ್ಮ ಮೆಟ್ರೊ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ಬಸವ ಮೆಟ್ರೊ ಎಂದು ಘೋಷಣೆ ಮಾಡಿ ಬಿಡುತ್ತಿದ್ದೆ. ಆದರೆ ಕೇಂದ್ರ ಸರ್ಕಾರದ ಅನುಮತಿಯೂ ಬೇಕಾಗಿರುವುದರಿಂದ ಪತ್ರ ಬರೆಯಲಾಗುವುದು’ ಎಂದು ತಿಳಿಸಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ‘ನಮ್ಮ ಮೆಟ್ರೊದ ಕೆಲ ನಿಲ್ದಾಣಗಳಿಗೆ ಅಂಬೇಡ್ಕರ್‌ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಹಿತ ಹಲವರ ಹೆಸರು ಇಡಲಾಗಿದೆ. ಮೆಟ್ರೊಕ್ಕೆ ಬಸವೇಶ್ವರರ ಹೆಸರಿಡುವುದು ಸೂಕ್ತ‌’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.