ADVERTISEMENT

‘ಜೀವನಪ್ರೀತಿ ಕಟ್ಟಿಕೊಟ್ಟ ಕವಿ ಬೇಂದ್ರೆ’

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 18:57 IST
Last Updated 31 ಜನವರಿ 2020, 18:57 IST
ರಂಗನಿರ್ದೇಶಕ ನಾ.ಸು.ನಾಗೇಶ್‌ ಮತ್ತು ಅವರ ಪತ್ನಿ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ದ.ರಾ.ಬೇಂದ್ರೆ ಕಾವ್ಯಕೂಟದ ಉಪಾಧ್ಯಕ್ಷ ಶ್ರ.ದೇ.ಪಾರ್ಶ್ವನಾಥ್‌, ವಿ.ಚಂದ್ರಶೇಖರ ನಂಗಲಿ, ಬಿ.ವಿ.ವಸಂತಕುಮಾರ್‌, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ್‌ ಬಿ.ಮಹಿಷಿ ಹಾಗೂ ಜಿ.ಕೃಷ್ಣಪ್ಪ ಇದ್ದರು - -- –ಪ್ರಜಾವಾಣಿ ಚಿತ್ರ
ರಂಗನಿರ್ದೇಶಕ ನಾ.ಸು.ನಾಗೇಶ್‌ ಮತ್ತು ಅವರ ಪತ್ನಿ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ದ.ರಾ.ಬೇಂದ್ರೆ ಕಾವ್ಯಕೂಟದ ಉಪಾಧ್ಯಕ್ಷ ಶ್ರ.ದೇ.ಪಾರ್ಶ್ವನಾಥ್‌, ವಿ.ಚಂದ್ರಶೇಖರ ನಂಗಲಿ, ಬಿ.ವಿ.ವಸಂತಕುಮಾರ್‌, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ್‌ ಬಿ.ಮಹಿಷಿ ಹಾಗೂ ಜಿ.ಕೃಷ್ಣಪ್ಪ ಇದ್ದರು - -- –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರೀತಿ ಎಂದರೆ ಸುಖ ಮಾತ್ರವಲ್ಲ. ದುಃಖದ ಆಳದಲ್ಲಿ ಹುಟ್ಟಬಹುದಾದ ಅಮೃತ ತತ್ವ ಎನ್ನುವುದನ್ನು ತಿಳಿಸಿಕೊಟ್ಟ ಕವಿ ಬೇಂದ್ರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ದ.ರಾ. ಬೇಂದ್ರೆ ಕಾವ್ಯಕೂಟ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬೇಂದ್ರೆ ಅವರ 124ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಬೇಂದ್ರೆ ತಮ್ಮ ಕಣ್ಣೆದುರಿಗೇ ಆರು ಮಕ್ಕಳ ಸಾವನ್ನು ನೋಡಿದರೂ ಜೀವನ ಪ್ರೀತಿಯನ್ನು ತೊರೆಯಲಿಲ್ಲ. ತಮ್ಮ ಅನುಭವವನ್ನೂ ಮಾತನ್ನಾಗಿಸಿದ ಕವಿ ಅವರು. ಅವರ ಜೀವನ ಬಹಳಷ್ಟು ಜನರಿಗೆ ನಂದಾದೀಪವಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಬೇಂದ್ರೆ ಮತ್ತು ಕುವೆಂಪು ದಿವ್ಯ ಚೇತನರಾಗಿದ್ದಾರೆ’ ಎಂದರು.

‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಸಾಮ್ಯತೆಯಿದ್ದು, ಪರಸ್ಪರ ಪೂರಕವಾಗಿದೆ. ಗ್ರೀಕ್ ಕಾವ್ಯಗಳು ದುರಂತದಲ್ಲಿ ಅಂತ್ಯವಾಗುವುದಿದೆ. ಆದರೆ, ನಮ್ಮ ಕಾವ್ಯ ಪರಂಪರೆಯಲ್ಲಿ ನೋವಿನ ತುತ್ತತುದಿಯಲ್ಲಿಯೂ ಸುಖಾಂತ್ಯ ಇರುತ್ತದೆ’ ಎಂದು ತಿಳಿಸಿದರು.

ADVERTISEMENT

ವಿಮರ್ಶಕ ವಿ.ಚಂದ್ರಶೇಖರ ನಂಗಲಿ, ‘ಬೇಂದ್ರೆ ಮತ್ತು ಕುವೆಂಪು ಅವರನ್ನು ಬಹುತೇಕರು ವಿರುದ್ಧ ಧ್ರುವ ಎಂಬಂತೆ ಬಿಂಬಿಸಿದರು. ಅವರಿಬ್ಬರನ್ನು ಹೀಗೆ ನೋಡುವುದು ಸರಿಯಲ್ಲ. ಬೇಂದ್ರೆ ಅವರದ್ದು ಪಂಚಭೂತಗಳ ಕಾವ್ಯವಾಗಿದ್ದು, ಅದು ಮಣ್ಣು, ನೀರು, ಗಾಳಿ, ಆಕಾಶ ಹಾಗೂ ಬೆಳಕಿಗೆ ಸಂಬಂಧಿಸಿದೆ’ ಎಂ‌ದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.