ADVERTISEMENT

‘ಲಿವಿಂಗ್ ಲೈಟ್ಲಿ’ ಉತ್ಸವದ ವಸ್ತುಪ್ರದರ್ಶನ: ಅಲೆಮಾರಿ ಪಶುಪಾಲಕರ ಬದುಕು ಅನಾವರಣ

ಇಂದಿರಾ ಗಾಂಧಿ ಕಲಾ ಕೇಂದ್ರದಲ್ಲಿ ಗಮನ ಸೆಳೆದ ವಸ್ತುಪ್ರದರ್ಶನ

ಕೆ.ಎಸ್.ಸುನಿಲ್
Published 15 ಫೆಬ್ರುವರಿ 2025, 23:06 IST
Last Updated 15 ಫೆಬ್ರುವರಿ 2025, 23:06 IST
ಬೆಂಗಳೂರಿನ 'ಇಂದಿರಾ ಗಾಂಧಿ ಪ್ರಾದೇಶಿಕ ಕಲಾಕೇಂದ್ರ' ದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನದಲ್ಲಿ ಅಲೆಮಾರಿ ಪಶುಪಾಲಕ ಕುಟುಂಬವು ಕುದುರೆ ಮೇಲೆ ಸಾಮಗ್ರಿ ಸಾಗಿಸುತ್ತಿರುವುದನ್ನು ವೀಕ್ಷಿಸಿದ ಪ್ರೇಕ್ಷಕರು. -ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರಿನ 'ಇಂದಿರಾ ಗಾಂಧಿ ಪ್ರಾದೇಶಿಕ ಕಲಾಕೇಂದ್ರ' ದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನದಲ್ಲಿ ಅಲೆಮಾರಿ ಪಶುಪಾಲಕ ಕುಟುಂಬವು ಕುದುರೆ ಮೇಲೆ ಸಾಮಗ್ರಿ ಸಾಗಿಸುತ್ತಿರುವುದನ್ನು ವೀಕ್ಷಿಸಿದ ಪ್ರೇಕ್ಷಕರು. -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಕುದುರೆ, ಕತ್ತೆಗಳ ಮೇಲೆ ಸಾಮಗ್ರಿ ತುಂಬಿಕೊಂಡು ಊರೂರು ಸುತ್ತುವ ಕುಟುಂಬ, ಹುಲ್ಲಿನ ಗುಡಿಸಲಿನಲ್ಲಿಯೇ ವಾಸ, ವಿಶಿಷ್ಟ ವೇಷ ಧರಿಸಿ ಕುರಿ ತುಪ್ಪಟ ತೆಗೆಯುವುದು, ಮಹಿಳೆಯರು ಕಂಬಳಿ ನೇಯ್ಗೆ ಕಾಯಕದಲ್ಲಿ ಮಗ್ನರಾಗಿರುವುದು..

–ಹೀಗೆ ದೇಶದ ಅಲೆಮಾರಿ ಪಶುಪಾಲಕ ಸಮುದಾಯಗಳ ಸಮಗ್ರ ಜೀವನ ಶೈಲಿಯನ್ನು ಕಟ್ಟಿಕೊಂಡುವಂಥ ಚಿತ್ರಗಳು ಮತ್ತು ಸಾಮಗ್ರಿಗಳು ಅಲ್ಲಿ ಅನಾವರಣಗೊಂಡಿದ್ದವು.

ಮಲ್ಲತ್ತಹಳ್ಳಿಯ ಇಂದಿರಾ ಗಾಂಧಿ ಪ್ರಾದೇಶಿಕ ಕಲಾ ಕೇಂದ್ರದಲ್ಲಿ ಸಿಎಫ್‌ಪಿ ಮತ್ತು ಸಹಜೀವ ಜಂಟಿಯಾಗಿ ಆಯೋಜಿಸಿರುವ ಅಲೆಮಾರಿ ಪಶುಪಾಲಕರ ಬದುಕು ಮತ್ತು ಸಂಸ್ಕೃತಿ ಕುರಿತ ‘ಲಿವಿಂಗ್ ಲೈಟ್ಲಿ’ ಉತ್ಸವದ ವಸ್ತುಪ್ರದರ್ಶನದಲ್ಲಿ ಇಂಥ ಬೆರಗಿನ ಜಗತ್ತನ್ನು ಕಾಣಬಹುದು. ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಭಾನುವಾರವೇ ಕೊನೆ ದಿನ.

ADVERTISEMENT

ಅಲೆಮಾರಿ ಪಶುಪಾಲಕ ಸಮುದಾಯಗಳು ಬದುಕು ಕಟ್ಟಿಕೊಳ್ಳಲು, ಆರ್ಥಿಕ ಸ್ಥಿತಿ ವೃದ್ಧಿಸಿಕೊಳ್ಳಲು ತಮ್ಮ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಾ ವಲಸೆ ಹೋಗುತ್ತವೆ. ಇಂಥ ಸಮುದಾಯದ ಜೀವನ ಕ್ರಮ, ಉಪಯೋಗಿಸುವ ವಸ್ತುಗಳು, ಸಂಸ್ಕೃತಿ ಬಗ್ಗೆ ವಸ್ತುಪ್ರದರ್ಶನಲ್ಲಿ ಮಾಹಿತಿ ನೀಡಲಾಗುತ್ತದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಸಮಾವೇಶವನ್ನು ಆಯೋಜಿಸಲಾಗಿದೆ.

‘ಅಲೆಮಾರಿ ಬಜಾರ್‌’ನಲ್ಲಿ ಚರ್ಮದ ದೀಪ, ಜೊಂಡು ಬಳಸಿ ತಯಾರಿಸಿದ ಬುಟ್ಟಿ, ಕೈ ಚೀಲ, ಗೃಹಬಳಕೆಯ ಪರಿಕರಗಳು, ವ್ಯಾಪಾರದ ಶೈಲಿ, ಎಂಬ್ರಾಯಿಡರಿ ವಸ್ತ್ರಗಳು, ಗೃಹಾಲಂಕಾರಿಕ ಸಾಮಗ್ರಿಗಳು ಹಾಗೂ ಪಾರಂಪರಿಕ ಕಸುಬುಗಳನ್ನು ಪರಿಚಯಿಸುವ ವಸ್ತುಗಳು ಪ್ರದರ್ಶನದಲ್ಲಿವೆ. ಉಣ್ಣೆಯ ವಿನ್ಯಾಸಗಳ ಕಲಾಕೃತಿಗಳ ಜೊತೆಗೆ ಛಾಯಾಚಿತ್ರ ಪ್ರದರ್ಶನಗಳೂ ನೋಡುಗರ ಗಮನ ಸೆಳೆಯುತ್ತಿವೆ.

ಅಲೆಮಾರಿ ಪಶುಪಾಲಕ ಜುಂಜಪ್ಪ ಹಾಗೂ ಕುರಿ ಕಾಯುತ್ತಾ ಬದುಕು ಸಾಗಿಸುತ್ತಿದ್ದ ಬಾಳೂ ಮಾಮಾ ಅವರ ಜೀವನಾಧರಿತ ಕಿರುಚಿತ್ರಗಳನ್ನು ಇಲ್ಲಿ ನೋಡಬಹುದು. ಡಕ್ಕನಿ ಕುರಿ, ಅಮೃತ್‌ ಮಹಲ್ ಹಸು, ಕೋಣದ ಮಾದರಿಯನ್ನೂ ಕಣ್ತುಂಬಿಕೊಳ್ಳಬಹುದು.

ಅಲೆಮಾರಿ ಪಶುಪಾಲಕ ಕುಟುಂಬವು ಉಣ್ಣೆಯಿಂದ ತಯಾರಿಸಿದ ಕಂಬಳಿ ಮ್ಯಾಟ್‌ ಖರೀದಿಸಿದ ಪ್ರೇಕ್ಷಕರು . -ಪ್ರಜಾವಾಣಿ ಚಿತ್ರ/ ರಂಜು ಪಿ

ಪಶುಪಾಲಕರ ದುಂಡು ಮೇಜಿನ ಸಭೆ ನಿರ್ಣಯಗಳು  

* ಕರ್ನಾಟಕದ ಕಾಡು ಗೊಲ್ಲರು ಮ್ಯಾಸಬೇಡರು ಅಲೆಮಾರಿ ಕುರುಬರು ಸೇರಿದಂತೆ ಅಲೆಮಾರಿ ಪಶುಪಾಲ ಸಮುದಾಯಗಳ ಜಾನುವಾರು ಗಣತಿ ಮಾಡಬೇಕು.

* ಪಶುಪಾಲಕರು ವಲಸೆ ಹೋಗುವ ಮಾರ್ಗಗಳ ಸಮೀಕ್ಷೆ ನಡೆಸಿ ಮ್ಯಾಪಿಂಗ್ ಮಾಡಬೇಕು ಹಾಗೂ ಅವರಿಗೆ ತಂಗುವ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.

* ಗೋಮಾಳ ಕೆರೆಕುಂಟೆಗಳ ಒತ್ತುವರಿ ತೆರವುಗೊಳಿಸಿ ದನ ಆಡು ಕುರಿಗಳನ್ನು ಮೇಯಿಸಲು ಅನುವಾಗುವಂತೆ ಕ್ರಮ ಕೈಗೊಳ್ಳಬೇಕು.

*ರಾಜ್ಯದ 700 ಕುರಿ ಸೊಸೈಟಿಗಳ (ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಾಕರ ಸಂಘ) ಸಬಲೀಕರಣವಾಗಬೇಕು. ಸುಮಾರು 142 ಕುರಿ ಸಂತೆಗಳಿಗೆ ಮೂಲಸೌಕರ್ಯ ನೀಡಬೇಕು.

* ಮಾಂಸಾಹಾರ ಸಂಸ್ಕೃತಿಯನ್ನು ತಳಮಟ್ಟದಲ್ಲಿ ಬಲಪಡಿಸಲು ತಾಲ್ಲೂಕು ಮಟ್ಟದಲ್ಲಿ ‘ದನ ಆಡು ಕುರಿ ಬಾಡಿನ ಹಬ್ಬ’ ಆಯೋಜಿಸಬೇಕು.

* ಪಶು ವಿಶ್ವವಿದ್ಯಾಲಯದಲ್ಲಿ ಮೀಟ್‌ ಸೈನ್ಸ್ ವಿಭಾಗ ಬಲಪಡಿಸಿ ಮಾಂಸ ಸಂಸ್ಕರಣೆ ಮೌಲ್ಯವರ್ಧನೆ ಕುರಿತು ಡಿಪ್ಲೊಮಾ ಕೋರ್ಸ್‌ ಆರಂಭಿಸಬೇಕು.

* ಪಶು‍ಪಾಲನಾ ಕ್ಷೇತ್ರದ ಸಮಗ್ರ ಅಧ್ಯಯನಕ್ಕೆ ಸಮಿತಿ ರಚಿಸಬೇಕು.

’ಜೀವನ ಕ್ರಮ ಸಂಸ್ಕೃತಿ ಸಂಪ್ರದಾಯ ಪ್ರದರ್ಶನ‘

‘ಫೆಬ್ರುವರಿ 1 ರಿಂದ 16ರವರೆಗೆ ‘ಲಿವಿಂಗ್ ಲೈಟ್ಲಿ ಉತ್ಸವ’ ಆಯೋಜಿಸಿದ್ದು ಸಮುದಾಯದ ಇತಿಹಾಸ ಜೀವನ ಕ್ರಮ ಸಂಸ್ಕೃತಿ ಕಲೆ ವಿಶಿಷ್ಟ ಸಂಪ್ರದಾಯಗಳು ಹಾಗೂ ಸಂಸ್ಕತಿಗೆ ಸಂಬಂಧಿಸಿದ ವಿಷಯಗಳು ಪ್ರದರ್ಶನದಲ್ಲಿವೆ. 15 ದಿನಗಳ ಉತ್ಸವದಲ್ಲಿ ಪರಿಸರದ ಜೊತೆಗಿನ ಸಹಜೀವನ ಹಾಗೂ ಆರ್ಥಿಕ ಚಟುವಟಿಕೆಗಳು ಸಂಗೀತ ಕಾರ್ಯಕ್ರಮ ಕಾರ್ಯಾಗಾರ ಹುಲ್ಲುಗಾವಲು ರಕ್ಷಣೆ ಕುರಿತು ಚರ್ಚೆಗಳು ನಡೆದಿವೆ’ ಎಂದು ಪಶುವೈದ್ಯ ರಘುಪತಿ ‘ಪ್ರಜಾವಾಣಿ’ಗೆ ವಿವರಿಸಿದರು. ವಸ್ತುಪ್ರದರ್ಶನ ಕ್ಯುರೇಟರ್‌ ಸುಷ್ಮಾ ಮಾತನಾಡಿ ‘ಈ ಸಮುದಾಯದ ಸಮಗ್ರ ಬದುಕನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ ತಮಿಳುನಾಡು ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳ ಅಲೆಮಾರಿ ಪಶುಪಾಲಕರು ಉತ್ಸವಕ್ಕೆ ಭೇಟಿ ನೀಡಿ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡರು. ಪಶುಪಾಲಕರು ಸಂಚರಿಸುವ ಮಾರ್ಗಗಳನ್ನು ಸರ್ಕಾರ ರಕ್ಷಣೆ ಮಾಡಬೇಕು ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.