ADVERTISEMENT

Driving License Reform: ಎಲ್‌ಎಲ್‌ಆರ್‌ಗೆ ಸ್ಮಾರ್ಟ್ ‘ಲಾಕ್‌’

ಕಲಿಕಾ ಪರವಾನಗಿ ತಾತ್ಕಾಲಿಕವಾಗಿ ಬಂದ್‌ | ಕಾಯುತ್ತಿರುವ ಕಲಿಕೆದಾರರು

ಬಾಲಕೃಷ್ಣ ಪಿ.ಎಚ್‌
Published 28 ಸೆಪ್ಟೆಂಬರ್ 2025, 23:30 IST
Last Updated 28 ಸೆಪ್ಟೆಂಬರ್ 2025, 23:30 IST
ಪರಿವಾಹನ್‌ಗೆ ಸಂಯೋಜಿತವಾಗಿರುವ ಸ್ಮಾರ್ಟ್‌ ಲಾಕ್‌
ಪರಿವಾಹನ್‌ಗೆ ಸಂಯೋಜಿತವಾಗಿರುವ ಸ್ಮಾರ್ಟ್‌ ಲಾಕ್‌   

ಬೆಂಗಳೂರು: ಕಲಿಕಾ ಪರವಾನಗಿ ಪರೀಕ್ಷೆಗಳಲ್ಲಿ ನಡೆಯುವ ವಂಚನೆಯನ್ನು ತಡೆಗಟ್ಟಲು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ‘ಸ್ಮಾರ್ಟ್‌ ಲಾಕ್‌’ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿದೆ. ಅದು ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ ರಾಜ್ಯದಲ್ಲಿ ಕಲಿಕಾ  ಪರವಾನಗಿ (ಎಲ್‌ಎಲ್‌ಆರ್‌) ಸಿಗುತ್ತಿಲ್ಲ.

ಕಲಿಕಾ ಪರವಾನಗಿ ಆನಂತರ ಚಾಲನಾ ಪರವಾನಗಿಯನ್ನು ಸರಿಯಾದ ಪರೀಕ್ಷೆ ನಡೆಸದೇ ನೀಡಲಾಗುತ್ತಿದೆ ಎಂಬ ದೂರುಗಳು ಬಂದಿದ್ದವು. ಅದಕ್ಕಾಗಿ ‘ಪರಿವಾಹನ್ ಸೇವಾ ಪೋರ್ಟಲ್‌’ಗೆ ಸಂಯೋಜಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಕಲಿಕೆ ಮತ್ತು ಚಾಲನಾ ಪರವಾನಗಿಗಳಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಈಗ ಆನ್‌ಲೈನ್‌ ಮೂಲಕವೇ ನಡೆಯುತ್ತಿರುವುದರಿಂದ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸುತ್ತಾರೆ. ಎಲ್ಲ ಮಾಹಿತಿಗಳನ್ನು ಅಲ್ಲೇ ನೀಡುತ್ತಾರೆ. ಅವರಿಗೆ ದೈಹಿಕ ನ್ಯೂನತೆಗಳಿವೆಯೇ? ಮಾನಸಿಕವಾಗಿ ಸದೃಢರೇ ಎಂಬುದು ಆನ್‌ಲೈನ್‌ನಲ್ಲಿ ಗೊತ್ತಾಗುವುದಿಲ್ಲ. ಸ್ಮಾರ್ಟ್‌ ಲಾಕ್‌ ಸಾಫ್ಟ್‌ವೇರ್‌ ಮೂಲಕ ಅರ್ಜಿ ಸಲ್ಲಿಸಿದಾಗ ಇವೆಲ್ಲವನ್ನು ಅದು ಪತ್ತೆ ಹಚ್ಚುತ್ತದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಕಲಿಕಾ ಪರವಾನಗಿಗೆ ಅರ್ಜಿ ಸಲ್ಲಿಸಿದವರೇ ಸ್ಮಾರ್ಟ್‌ಲಾಕ್‌ ಎದುರು ಕುಳಿತುಕೊಳ್ಳಬೇಕಾಗುತ್ತದೆ. ಅವರ ಫೋಟೊ ತೆಗೆಯುವಾಗಲೇ ಅವರ ವರ್ತನೆಯನ್ನೂ ಈ ಸಾಫ್ಟ್‌ವೇರ್‌ ಅಭ್ಯಸಿಸುತ್ತದೆ. ತಲೆ ಹೊರಳಿಸುವುದು, ಕೈಕಾಲುಗಳ ಚಲನೆಗಳನ್ನು ಗಮನಿಸುತ್ತದೆ. ಫೋಟೊ ಅಪ್‌ಲೋಡ್‌ ಆದ ಮೇಲೆ ಪರದೆಯಲ್ಲಿ ಕೆಲವು ಪ್ರಶ್ನೆಗಳು ಬರುತ್ತವೆ. ಅವುಗಳಿಗೆ 30 ಸೆಕೆಂಡ್‌ಗಳಲ್ಲಿ ಉತ್ತರಿಸಬೇಕಾಗುತ್ತದೆ. ಇದೇ ರೀತಿಯ ವಿವಿಧ ಪರೀಕ್ಷೆಗಳು ನಡೆಯುತ್ತವೆ. ಅಲ್ಲದೇ ಪರೀಕ್ಷೆಗೆ ಬೇರೆಯವರು ಪ್ರವೇಶಿಸಿದರೆ ಅಥವಾ ದೂರದಿಂದ ಹೇಳಿಕೊಡುತ್ತಿದ್ದರೆ, ಅಭ್ಯರ್ಥಿಯು ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಸ್ಮಾರ್ಟ್‌ ಲಾಕ್‌ ನೋಡುವ ಬದಲು ಇನ್ನೆಲ್ಲೋ ನೋಡುತ್ತಿದ್ದರೆ ಅವೆಲ್ಲವನ್ನು  ಗಮನಿಸುತ್ತದೆ. ಇದು ನಿಯಮದ ಉಲ್ಲಂಘನೆ ಎಂದು ಅಪ್ಲಿಕೇಶನ್‌ ಅನ್ನು ಲಾಕ್‌ ಮಾಡಿ ಬಿಡುತ್ತದೆ ಎಂದು ವಿವರಿಸಿದರು.

ಸ್ಮಾರ್ಟ್‌ ಲಾಕ್‌ ವರ್ಚುವಲ್ ಆಗಿ ಕಾರ್ಯನಿರ್ವಹಿಸುತ್ತದೆ. ಅಭ್ಯರ್ಥಿಗಳ ವೆಬ್‌ಕ್ಯಾಮ್, ಮೈಕ್ರೊಫೋನ್ ಬಳಸಿಕೊಂಡು, ಚಲನವಲನ, ಪರಿಸರವನ್ನು ಗಮನಿಸಿಕೊಂಡು ನೈಜ ಸಮಯದಲ್ಲಿ ಅಭ್ಯರ್ಥಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ತಿಳಿಸಿದರು.

ಸ್ಮಾರ್ಟ್‌ ಲಾಕ್‌

‘ಸಾಫ್ಟ್‌ವೇರ್‌ ಅಪ್‌ಡೇಟ್‌ಗಾಗಿ ಕಾಯುತ್ತಿದ್ದೇವೆ’

ಕಂಪ್ಯೂಟರ್ ಆಧಾರಿತ ಕಲಿಕಾ ಪರವಾನಗಿ ಪರೀಕ್ಷೆಯ ಸಮಯದಲ್ಲಿ ನ್ಯಾಯಸಮ್ಮತ ಸುರಕ್ಷಿತ ದೃಢೀಕರಣವನ್ನು ಖಚಿತಪಡಿಸುವ ಡಿಜಿಟಲ್ ಮೇಲ್ವಿಚಾರಣೆಯ ವ್ಯವಸ್ಥೆಯೇ ಸ್ಮಾರ್ಟ್‌ ಲಾಕ್‌ ಸಾಫ್ಟ್‌ವೇರ್‌. ಇದನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಪ್ರಾಯೋಗಿಕವಾಗಿ ಪರೀಕ್ಷೆಗಳನ್ನು ನಡೆಸಿದಾಗ ಹಲವು ಪ್ರಶ್ನೆ ಗೊಂದಲಗಳು ಉದ್ಭವವಾಗಿವೆ. ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ. ಗೊಂದಲಗಳಿಗೆ ಪರಿಹಾರ ಸಿಕ್ಕಿ ಸಾಫ್ಟ್‌ವೇರ್‌ ಅಪ್‌ಡೇಟ್‌ಗೊಂಡ ಬಳಿಕ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಸ್‌. ಯೋಗೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಸ್ಮಾರ್ಟ್‌ ಲಾಕ್ ಯೋಜನೆ ಅನುಷ್ಠಾನ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದರಿಂದ ಎಲ್‌ಎಲ್‌ಆರ್‌ ನೀಡಲು ಸಮಸ್ಯೆಯಾಗಿದೆ. ಒಮ್ಮೆ ಸಾಫ್ಟ್‌ವೇರ್‌ ಅನುಷ್ಠಾನಗೊಂಡರೆ ಸುಲಭವಾಗಿ ಎಲ್‌ಎಲ್‌ಆರ್‌ ಪಡೆಯಲು ಸಾಧ್ಯವಾಗಲಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಜಂಟಿ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದರು.

ಸಿಬ್ಬಂದಿಗೆ ಮಾಹಿತಿ ಇಲ್ಲ ಹೊಸತಾಗಿ ವಾಹನ ಚಾಲನೆ ಕಲಿಯುವವರು ಎಲ್‌ಎಲ್‌ಆರ್‌ಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಕಚೇರಿಯಲ್ಲಿರುವ ಸಿಬ್ಬಂದಿಗೆ ಈ ಬಗ್ಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೇ ಇರುವುದರಿಂದ ‘ಸರ್ವರ್‌ ಬ್ಯುಸಿ’ ಎಂದು ಸಾರ್ವಜನಿಕರನ್ನು ಸಿಬ್ಬಂದಿ ವಾಪಸ್‌ ಕಳುಹಿಸುತ್ತಿದ್ದಾರೆ. ‘ನಾನು ನಾಲ್ಕು ವಾರಗಳಿಂದ ಎಲ್‌ಎಲ್‌ಆರ್‌ಗಾಗಿ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ಆನ್‌ಲೈನ್‌ನಲ್ಲೂ ಆಗುತ್ತಿಲ್ಲ. ಕಚೇರಿಗೆ ಹೋದರೆ ಸರ್ವರ್‌ ಬ್ಯುಸಿ ಇದೆ ಎಂದು ಹೇಳುತ್ತಿದ್ದರು. ಸರ್ವರ್‌ ಸಮಸ್ಯೆಯಲ್ಲ. ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುತ್ತಿದ್ದಾರೆ ಎಂಬುದು ಇವತ್ತೇ ಗೊತ್ತಾಗಿರೋದು. ಮೊದಲೇ ಗೊತ್ತಾಗಿದ್ದರೆ ಸುಮ್ಮನೆ ಅಲೆಯುವುದಾದರೂ ತಪ್ಪುತ್ತಿತ್ತು’ ಎಂದು ಸುಬ್ರಹ್ಮಣ್ಯನಗರದ ವಿವೇಕಾನಂದ ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.