ADVERTISEMENT

ಧಾರ್ಮಿಕ ಮೂಲಭೂತವಾದ ಸೋಲಬೇಕು: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಆಶಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 14:27 IST
Last Updated 17 ಏಪ್ರಿಲ್ 2024, 14:27 IST
   

ಬೆಂಗಳೂರು: ‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಾತಿವಾದ ಮತ್ತು ಧಾರ್ಮಿಕ ಮೂಲಭೂತವಾದಗಳು ಸೋಲಬೇಕು. ಆದ್ದರಿಂದ ಸಮಾನತೆ ಮತ್ತು ಸೌಹಾರ್ದತೆ ಪರವಾದ ಸೈದ್ಧಾಂತಿಕ ಶಕ್ತಿಗಳನ್ನು ಬೆಂಬಲಿಸಬೇಕು’ ಎಂದು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಆಶಯ ವ್ಯಕ್ತಪಡಿಸಿದೆ. 

ಇದಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರಾದ ಬರಗೂರು ರಾಮಚಂದ್ರಪ್ಪ, ಜಿ.ರಾಮಕೃಷ್ಣ, ಎನ್.ಗಾಯತ್ರಿ, ಸಿದ್ದನಗೌಡ ಪಾಟೀಲ, ರಾಜಪ್ಪ ದಳವಾಯಿ, ಆರ್.ಜಿ.ಹಳ್ಳಿ ನಾಗರಾಜ್, ಭಕ್ತರಹಳ್ಳಿ ಕಾಮರಾಜ್, ಬಿ.ರಾಜಶೇಖರಮೂರ್ತಿ, ಎಚ್.ಎಲ್.ಪುಷ್ಪ, ಕೆ.ಷರೀಫಾ, ಎ.ಬಿ.ರಾಮಚಂದ್ರಪ್ಪ, ಬಿ.ಎನ್.ಮಲ್ಲೇಶ್, ವೈ.ಬಿ.ಹಿಮ್ಮಡಿ, ಎಸ್.ವೈ.ಗುರುಶಾಂತ್, ಪಿ.ಆರ್.ವೆಂಕಟೇಶ್, ಅಬ್ದುಲ್ ಹೈ, ಅಶ್ವಿನಿ ಮದನಕರ ಹಾಗೂ ಎಚ್.ಆರ್. ಸ್ವಾಮಿ ಅವರು ಸಂಘಟನೆಯ ಆಶಯಕ್ಕೆ ಬೆಂಬಲ ಸೂಚಿಸಿದ್ದಾರೆ.

‘ನಮ್ಮ ದೇಶವು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ, ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ಮತ್ತು ಧರ್ಮ ದ್ವೇಷದ ವಾತಾವರಣದಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ. ವ್ಯಕ್ತಿಗತ ವಾಗ್ವಾದಗಳು ಮೇಲುಗೈ ಪಡೆದು, ಸೈದ್ಧಾಂತಿಕ ವಿಚಾರಗಳು ಹಿನ್ನೆಲೆಗೆ ಸರಿದಿವೆ’ ಎಂದು ಸಂಘಟನೆಯ ಬಿ.ರಾಜಶೇಖರಮೂರ್ತಿ ತಿಳಿಸಿದ್ದಾರೆ. 

ADVERTISEMENT

‘ಚುನಾವಣೆಯಲ್ಲಿನ ಆಯ್ಕೆಗಳಿಗೆ ಸೈದ್ಧಾಂತಿಕ ಒಲವು-ನಿಲುವುಗಳೇ ಆಧಾರವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯ ಉಳಿವು, ಪ್ರಜಾಪ್ರಭುತ್ವದ ಗೆಲುವು ಮುಖ್ಯವಾಗಬೇಕು. ಸಾಮಾಜಿಕ-ಆರ್ಥಿಕ ಸಮಾನತೆ ಮತ್ತು ಸೌಹಾರ್ದತೆಗಳು ಆದ್ಯತೆಯಾಗಬೇಕು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.