ADVERTISEMENT

ಅನಿರ್ದಿಷ್ಟಾವಧಿ ಲಾರಿ ಮುಷ್ಕರ: ವಾಣಿಜ್ಯ ಸೇವೆಯ ಲಾರಿಗಳ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 18:04 IST
Last Updated 18 ಜನವರಿ 2024, 18:04 IST
ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕು ಸಾಗಣೆ ಲಾರಿಗಳು ನಿಲ್ಲಿಸಿ ಲಾರಿ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ಮಾಡಿದರು. ಪ್ರಜಾವಾಣಿ ಚಿತ್ರ
ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕು ಸಾಗಣೆ ಲಾರಿಗಳು ನಿಲ್ಲಿಸಿ ಲಾರಿ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ಮಾಡಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಚಾಲಕರಿಗೆ ಮಾರಕವಾಗಿರುವ ರೀತಿಯಲ್ಲಿ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘ ಗುರುವಾರದಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಪ್ರಾರಂಭಿಸಿದೆ.

ಮುಷ್ಕರ ಬೆಂಬಲಿಸಿ ಯಶವಂತಪುರ ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌, ಕಂಠೀರವ ನಗರದ ಟರ್ಮಿನಲ್‌ಗಳಲ್ಲಿ ಸಾವಿರಾರು ಲಾರಿಗಳು ನಿಂತಿವೆ. ನಗರದ ಹೊರವಲಯದಲ್ಲೂ ಲಾರಿಗಳು ನಿಂತಿವೆ. ಅಗತ್ಯ ಸೇವೆ ಹೊರತುಪಡಿಸಿ ವಾಣಿಜ್ಯ ಸೇವೆಯ ಎಲ್ಲ ಲಾರಿಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. 

‘ಅಗತ್ಯ ವಸ್ತುಗಳಾದ ತರಕಾರಿ, ಔಷಧಿ, ಹಾಲು ಬಿಟ್ಟು ಉಳಿದ ಎಲ್ಲ ರೀತಿಯ ಶೇ 80 ರಷ್ಟು ಸರಕು ಸಾಗಾಣಿಕೆ ವಾಹನಗಳು ಗುರುವಾರ ರಸ್ತೆಗೆ ಇಳಿದಿಲ್ಲ’ ಎಂದು ಸಂಘದ ಗೌರವಾಧ್ಯಕ್ಷ ಚನ್ನಾರೆಡ್ಡಿ ತಿಳಿಸಿದರು. 

ADVERTISEMENT

‘ವೈಟ್‌ಫೀಲ್ಡ್‌ನಲ್ಲಿರುವ ಸ್ಯಾಟ್‌ಲೈಟ್ ಗೂಡ್ಸ್‌ ಟರ್ಮಿನಲ್‌ನಲ್ಲಿ ಮೂರು ರೈಲುಗಳು ಸರಕುಗಳನ್ನು ತುಂಬಿಕೊಂಡು ಹಳಿಯಲ್ಲೇ ನಿಂತಿವೆ. ಗೊಬ್ಬರ, ಗೋದಿ, ಆಲೂಗಡ್ಡೆ ಸೇರಿ ಇತರೆ ಸರಕುಗಳು ರೈಲಿನಲ್ಲಿವೆ. ನೈಋತ್ಯ ರೈಲ್ವೆ ಬೆಂಗಳೂರು ವಲಯದಿಂದ ಲಾರಿ ಸಂಘದೊಂದಿಗೆ ಮಾತನಾಡಿ ಸರಕು ಅನ್‌ಲೋಡ್‌ ಮಾಡಲು ಮನವಿ ಮಾಡಲಾಗಿದೆ’ ಎಂದು ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿನೇತ್ರ ತಿಳಿಸಿದರು.

‘ಯಶವಂತಪುರ ಎಪಿಎಂಸಿಗೆ ಪ್ರತಿನಿತ್ಯ 300ಕ್ಕೂ ಹೆಚ್ಚು ಲಾರಿಗಳು ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಸೇರಿ ಇತರೆ ಕೃಷಿ ಉತ್ಪನ್ನ, ತರಕಾರಿ ಹೊತ್ತು ಬರುತ್ತವೆ. ಆದರೆ, ಗುರುವಾರ 181 ಲಾರಿಗಳು ಮಾತ್ರ ಬಂದಿವೆ. ದಾಸನಪುರ ಮಾರುಕಟ್ಟೆಗೂ ಹೆಚ್ಚು ಲಾರಿಗಳು ಬಂದಿಲ್ಲ. ಆದರೆ ವಹಿವಾಟಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’ ಎಂದು ಯಶವಂತಪುರ ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ಮಾಹಿತಿ ನೀಡಿದರು.

ಲಾರಿ ಚಾಲಕರು ಮತ್ತು ಮಾಲೀಕರು ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕು ಸಾಗಣೆ ಲಾರಿಗಳು ಸಂಚರಿಸಿಲ್ಲ. ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.