ADVERTISEMENT

ಶಬ್ದ ಮಾಲಿನ್ಯ: ಕ್ರಮ ಕೈಗೊಂಡ ವಿವರ ಕೇಳಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 21:18 IST
Last Updated 19 ಏಪ್ರಿಲ್ 2021, 21:18 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಶಬ್ದ ಮಾಲಿನ್ಯದ ದೂರುಗಳ ಆಧಾರದ ಮೇಲೆ ಕೈಗೊಂಡ ಕ್ರಮಗಳ ವಿವರ ಸಲ್ಲಿಸುವಂತೆ ನಗರ ಪೊಲೀಸ್ ಕಮಿಷನರ್ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯೂಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ನಿಯಮಗಳ–2000ರ ನಿಬಂಧನೆಗಳನ್ನು ಉಲ್ಲಂಘಿಸಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ’ ಎಂದು ಅರ್ಜಿದಾರರು ದೂರಿದ್ದಾರೆ

ADVERTISEMENT

‘ಈ ವಿಷಯದಲ್ಲಿ ಕಾನೂನು ಜಾರಿಗೆ ತರುವ ಬದಲು ಕೆಎಸ್‌ಪಿಸಿಬಿ ಹಿರಿಯ ಅಧಿಕಾರಿಗಳು ಅಂಚೆ ಸಿಬ್ಬಂದಿ ರೀತಿ ವರ್ತಿಸುತ್ತಿದ್ದಾರೆ. ದೂರುಗಳನ್ನು ಪೊಲೀಸ್ ಕಮಿಷನರ್ ಮತ್ತು ಬಿಬಿಎಂಪಿಗೆ ರವಾನಿಸಿ ಸುಮ್ಮನಾಗುತ್ತಿದ್ದಾರೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಕಾನೂನಿನಲ್ಲಿ ಇರುವ ಅಧಿಕಾರ ಬಳಸಿ ಕ್ರಿಮಿನಲ್ ಕ್ರಮಗಳನ್ನು ಕೆಎಸ್‌ಪಿಸಿಬಿ ಪ್ರಾದೇಶಿಕ ಅಧಿಕಾರಿಗಳು ಕೈಗೊಳ್ಳಬೇಕು. ಹಿರಿಯ ಪರಿಸರ ಅಧಿಕಾರಿಗಳು ವಹಿಸಿರುವ ಪಾತ್ರವನ್ನು ಪರಿಶೀಲಿಸುವಂತೆ ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗುತ್ತಿದೆ’ ಎಂದು ಪೀಠ ತಿಳಿಸಿತು.

‘ಸ್ವೀಕರಿಸಿದ ದೂರುಗಳ ಆಧಾರದಲ್ಲಿ ಕ್ರಮ ಕೈಗೊಂಡಿರುವ ಸಂಬಂಧ ಪೊಲೀಸ್ ಅಧಿಕಾರಿಗಳು ಅಫಿಡವಿಟ್ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನುಜೂ.17ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.