ADVERTISEMENT

ವಿವಿಧ ಪಕ್ಷಗಳಿಗೆ ಪರಿಸರ ಪ್ರಣಾಳಿಕೆ ಹಸ್ತಾಂತರ

ಪ್ರಕೃತಿ ವಿಕೋಪಗಳನ್ನು ತಡೆಯುವ ಕ್ರಮಗಳನ್ನು ಘೋಷಿಸಲು ರಾಜಕೀಯ ಪಕ್ಷಗಳಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 15:40 IST
Last Updated 6 ಏಪ್ರಿಲ್ 2024, 15:40 IST
ನಗರದಲ್ಲಿ ಶನಿವಾರ ನಡೆದ ‘ಪರಿಸರ ಪ್ರಣಾಳಿಕೆಗಾಗಿ ಬೆಂಗಳೂರು ಸಮಾವೇಶ’ದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪರಿಸರ ಪ್ರಣಾಳಿಕೆ ಪ್ರತಿಯನ್ನು ನೀಡಿದರು. –ಪ್ರಜಾವಾಣಿ
ನಗರದಲ್ಲಿ ಶನಿವಾರ ನಡೆದ ‘ಪರಿಸರ ಪ್ರಣಾಳಿಕೆಗಾಗಿ ಬೆಂಗಳೂರು ಸಮಾವೇಶ’ದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪರಿಸರ ಪ್ರಣಾಳಿಕೆ ಪ್ರತಿಯನ್ನು ನೀಡಿದರು. –ಪ್ರಜಾವಾಣಿ   

ಬೆಂಗಳೂರು: ಅತಿವೃಷ್ಟಿ, ಅನಾವೃಷ್ಟಿ, ಬಿಸಿ ಅಲೆ ಮುಂತಾದ ಪ್ರಕೃತಿ ವಿಕೋಪಗಳನ್ನು ಎದುರಿಸಲು ಅಧಿಕಾರಕ್ಕೆ ಬರುವವರು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ‘ಪರಿಸರಕ್ಕಾಗಿ ನಾವು’ ಸಂಘಟನೆ ಸಿದ್ಧ‍‍ಪಡಿಸಿದ ಪರಿಸರ ಪ್ರಣಾಳಿಕೆಯನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ಶನಿವಾರ ನಡೆಯಿತು.

ಪಕ್ಷಗಳ ಪ್ರಣಾಳಿಕೆಯಲ್ಲಿ ಪರಿಸರ ಪರ ನಿಲುವುಗಳನ್ನು ಘೋಷಣೆ ಮಾಡಬೇಕು ಎಂದು ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.

ಪರಿಸರ ಕಾರ್ಯಕರ್ತರ ಸಂಘಟನೆ ‘ಪರಿಸರಕ್ಕಾಗಿ ನಾವು’ ಶನಿವಾರ ಇಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ‘ಪರಿಸರ ಪ್ರಣಾಳಿಕೆಗಾಗಿ ಬೆಂಗಳೂರು ಸಮಾವೇಶ’ ಇದಕ್ಕೆ ಸಾಕ್ಷಿಯಾಯಿತು. ಕಾಂಗ್ರೆಸ್‌, ಜೆಡಿಎಸ್, ಎಎಪಿ, ಕೆಆರ್‌ಎಸ್‌, ಸಿಪಿಐ, ಎಸ್‌ಯುಸಿಐ ಪಕ್ಷಗಳ ಪ್ರತಿನಿಧಿಗಳು ‘ಪರಿಸರ ಪ್ರಣಾಳಿಕೆ’ಯನ್ನು ಸ್ವೀಕರಿಸಿದರು. ಬಿಜೆಪಿಯ ಪ್ರತಿನಿಧಿ ಬಂದಿರಲಿಲ್ಲ.

ADVERTISEMENT

ಶಾಖವರ್ಧಕ ಅನಿಲಗಳ ವಿಸರ್ಜನೆಯನ್ನು ಶೂನ್ಯಕ್ಕೆ ಇಳಿಸುವ ವಾಗ್ದಾನವನ್ನು ಈಡೇರಿಸಲು ಒತ್ತಾಯಿಸಬೇಕು. ಮಾಧವ ಗಾಡ್ಗೀಳ್‌ ವರದಿಯನ್ನು ಜಾರಿಗೊಳಿಸಬೇಕು. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ಕರಾವಳಿಯಲ್ಲಿ ಕಲ್ಲಿದ್ದಲು/ಅಣು/ಜಲ ವಿದ್ಯುತ್‌ ಸ್ಥಾವರ ಸ್ಥಾಪಿಸಬಾರದು. ಗಣಿಗಾರಿಕೆ, ರಸ್ತೆ ವಿಸ್ತರಣೆಗೆ ಅವಕಾಶ ನೀಡಬಾರದು. ಪರಿಸರ ಶಿಕ್ಷಣ, ಬದಲಾದ ಹವಾಗುಣವನ್ನು ಎದುರಿಸಲು ಬೇಕಾದ ಶಿಕ್ಷಣವನ್ನು ಶಾಲೆಗಳಲ್ಲಿ ನೀಡಬೇಕು. ರಸ್ತೆ ಬದಿ ಮರಗಳನ್ನು ಸಮುದಾಯದ ಆಸ್ತಿಯೆಂದು ಘೋಷಿಸಬೇಕು. ಶೇ 33ರಷ್ಟು ಕಾಡು ಬೆಳೆಸಬೇಕು. ಉತ್ತರ ಕರ್ನಾಟಕ ಮರುಭೂಮಿಯಾಗುವುದನ್ನು ತಡೆಯಲು ಹಸಿರುಗೋಡೆ ನಿರ್ಮಿಸಬೇಕು ಎಂದು ಪ್ರಣಾಳಿಕೆ ಪ್ರತಿಪಾದಿಸಿದೆ.

ಕೃಷಿಯಲ್ಲಿ ಕೀಟನಾಶಕ, ಕಳೆನಾಶ, ಇತರ ರಾಸಾಯನಿಕಗಳ ಬಳಕೆ ತಗ್ಗಿಸಲು ಬಿಗಿಯಾದ ಕಾನೂನುಗಳನ್ನು ತರಬೇಕು. ಇಂಗಾಲದ ತೆರಿಗೆ ವಿಧಿಸಬೇಕು. ಪ್ಲಾಸ್ಟಿಕ್‌ ತ್ಯಾಜ್ಯ ಆಮದು ನಿಲ್ಲಿಸಬೇಕು. ಪ್ಲಾಸ್ಟಿಕ್‌ ಮರುಬಳಕೆ ಕಡ್ಡಾಯ ಮಾಡಬೇಕು. ಬೃಹತ್‌ ಜಲಾಶಯ ನಿರ್ಮಿಸಬಾರದು. ಇರುವ ಜಲಾಶಯಗಳ ಹೂಳು ಕಾಲಕಾಲಕ್ಕೆ ತೆಗೆಯಬೇಕು. ನದಿಗಳಿಗೆ ಕೈಗಾರಿಕೆಗಳ ನೀರು ನೇರವಾಗಿ ಬಿಡಬಾರದು. ಮಳೆನೀರು ಸಂಗ್ರಹದಿಂದಲೇ ನಗರಗಳಿಗೆ ನೀರು ಪೂರೈಸಬೇಕು. ಉಪ್ಪು ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸುವ ಘಟಕಗಳನ್ನು ಕರಾವಳಿಯಲ್ಲಿ ಸ್ಥಾಪಿಸಬೇಕು. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳಿದ್ದರೆ ಹೆಚ್ಚು ತೆರಿಗೆ ವಿಧಿಸಬೇಕು. ಗ್ರಾಮಸ್ವರಾಜ್ಯ ಜಾರಿಗೊಳಿಸಬೇಕು. ಹವಮಾನ ವೈಪರೀತ್ಯಗಳಿಗೆ ಸಿಲುಕಿದ ಕೃಷಿಕರಿಗೆ, ಕೂಲಿಕಾರ್ಮಿಕರಿಗೆ ಪರಿಹಾರ, ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಣಾಳಿಕೆ ಒತ್ತಾಯಿಸಿದೆ.

ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಪರಿಸರ ಸಂಬಂಧಿ ಪ್ರಶ್ನೆಗಳನ್ನು ಕೇಳಿ, ಸರಿ ಉತ್ತರ ನೀಡಿದವರಿಗೆ ಪುಸ್ತಕಗಳನ್ನು ನೀಡಲಾಯಿತು. ‘ಪರಿಸರಕ್ಕಾಗಿ ನಾವು’ ನಾಗೇಶ ಹೆಗಡೆ, ಆಂಜನೇಯ ರೆಡ್ಡಿ, ಆರ್‌.ಪಿ. ವೆಂಕಟೇಶಮೂರ್ತಿ, ಎಚ್‌.ಕೆ. ಗೌಡಯ್ಯ, ಪರಶುರಾಮೇಗೌಡ, ವಿಶಾಲಾಕ್ಷಿ ಶರ್ಮಾ, ಶೋಭಾ ವಿ. ಭಟ್‌ ಸಹಿತ ಅನೇಕ ಪರಿಸರ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.