ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊ ರೈಲುಗಳಲ್ಲಿ ಲಗೇಜ್ ರ‍್ಯಾಕ್‌ಗಳು ಇರಲಿವೆ. ಬೇರೆ ಯಾವುದೇ ಮಾರ್ಗದ ಮೆಟ್ರೊಗಳಲ್ಲಿ ಇಲ್ಲದ ಈ ಸೌಲಭ್ಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಪ್ರಯಾಣಿಕರಿಗೆ ದೊರೆಯಲಿದೆ.
ಈಗಿರುವ ಮೆಟ್ರೊ ರೈಲುಗಳಲ್ಲಿ ಲಗೇಜ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲ. 60 ಸೆಂಟಿ ಮೀಟರ್ ಉದ್ದ, 45 ಸೆಂಟಿ ಮೀಟರ್ ಅಗಲ ಮತ್ತು 25 ಸೆಂಟಿ ಮೀಟರ್ ಎತ್ತರದ ಬ್ಯಾಗ್‌ಗಳಲ್ಲಿ ಗರಿಷ್ಠ 15 ಕೆ.ಜಿ. ತೂಕದ ವಸ್ತುಗಳನ್ನು ಉಚಿತವಾಗಿ ಒಯ್ಯಬಹುದು. ಒಬ್ಬರು ಇಂಥ ಒಂದು ಬ್ಯಾಗ್ ಮಾತ್ರ ಕೊಂಡೊಯ್ಯಬಹುದಾಗಿದ್ದು, ಅದಕ್ಕಿಂತ ಭಾರವಿರುವ ಮತ್ತು ಅಧಿಕ ಬ್ಯಾಗ್‌ಗಳಿದ್ದರೆ ₹ 30 ಶುಲ್ಕ ನೀಡಬೇಕು. ಶುಲ್ಕ ಪಾವತಿಸದವರಿಗೆ ₹ 250ರವರೆಗೆ ದಂಡ ವಿಧಿಸಲು ಅವಕಾಶವಿದೆ. ದುಪ್ಪಟ್ಟು ಭಾರಕ್ಕಿಂತ ಅಧಿಕ ಇರುವ ಬ್ಯಾಗ್‌ಗಳನ್ನು ಒಯ್ಯುವಂತಿಲ್ಲ.
ನೀಲಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊ ರೈಲಿನಲ್ಲಿ ಲಗೇಜ್‌ಗಾಗಿಯೇ ಪ್ರತ್ಯೇಕ ರ‍್ಯಾಕ್ ಬರಲಿದೆ. ಪ್ರತಿ ಬೋಗಿಯ ಎರಡು ತುದಿಗಳಲ್ಲಿ ಈಗ ಇಬ್ಬರು ಕುಳಿತುಕೊಳ್ಳಬಹುದಾದ ತಲಾ ಎರಡು ಸೀಟುಗಳಿವೆ. ಆ ಜಾಗದಲ್ಲಿ ರ‍್ಯಾಕ್ ಬರಲಿದೆ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ರೇಷ್ಮೆ ಮಂಡಳಿಯಿಂದ ಹಳದಿ ಮಾರ್ಗವನ್ನು, ಕೆ.ಆರ್. ಪುರದಲ್ಲಿ ನೇರಳೆ ಮಾರ್ಗವನ್ನು, ನಾಗವಾರದಲ್ಲಿ ಗುಲಾಬಿ ಮಾರ್ಗವನ್ನು, ಕೆಂಪಾಪುರದಲ್ಲಿ ಕಿತ್ತಳೆ ಮಾರ್ಗವನ್ನು ಹಾಗೂ ಅಗರದಲ್ಲಿ ಪ್ರಸ್ತಾವಿತ ಕೆಂಪು ಮಾರ್ಗವನ್ನು ನೀಲಿ ಮಾರ್ಗವು ಸಂಪರ್ಕಿಸುವುದರಿಂದ ನಗರದ ಎಲ್ಲ ಭಾಗಗಳಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಲಭವಾಗಿ ಮೆಟ್ರೊದಲ್ಲಿ ಬರಲು ಸಾಧ್ಯವಾಗಲಿದೆ. ಈಗಿರುವ ಲಗೇಜ್ ನಿಯಮವನ್ನು ನೀಲಿ ಮಾರ್ಗಕ್ಕೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸದ್ಯ ಕಾಮಗಾರಿಗಳು ನಡೆಯುತ್ತಿದ್ದು, ಮುಂದಿನ ವರ್ಷ ಪಾರ್ಶ್ವ ಸಂಚಾರ ಆರಂಭವಾಗಲಿದೆ. ಆಗ ಲಗೇಜ್ ನಿಯಮ ಪರಿಷ್ಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನೀಲಿ ಮಾರ್ಗ: ಕೇಂದ್ರ ರೇಷ್ಮೆ ಸಂಸ್ಥೆಯಿಂದ (ಸೆಂಟ್ರಲ್ ಸಿಲ್ಕ್ ಬೋರ್ಡ್) ಕೆ.ಆರ್.ಪುರದವರೆಗೆ (ಹಂತ 2ಎ) ಮತ್ತು ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ (ಹಂತ 2ಬಿ) ಎರಡು ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ. ಹಂತ 2ಎ ಭಾಗದಲ್ಲಿ 2026ರ ಸೆಪ್ಟೆಂಬರ್‌ನಲ್ಲಿ ಮೆಟ್ರೊ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಇಟ್ಟುಕೊಂಡಿದೆ. ಹಂತ 2ಬಿಯಲ್ಲಿ 2027ರ ಅಂತ್ಯಕ್ಕೆ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.
‘ಉಳಿದ ಮಾರ್ಗಗಳಲ್ಲೂ ಬೇಕು’
ಜನದಟ್ಟಣೆ ಸಮಯದಲ್ಲಿ ಮೆಟ್ರೊಗಳಲ್ಲಿ ಬ್ಯಾಗ್ ಹಾಕಿಕೊಂಡು ನಿಲ್ಲಲೂ ಸಾಧ್ಯವಿಲ್ಲದ ಪರಿಸ್ಥಿತಿ ಇರುತ್ತದೆ. ಲಗೇಜ್‌ಗಾಗಿ ಪ್ರತ್ಯೇಕ ವ್ಯವಸ್ಥೆಯು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೆಟ್ರೊಗಳಲ್ಲಿ ಮಾತ್ರವಲ್ಲ ಉಳಿದ ಮಾರ್ಗಗಳಲ್ಲಿಯೂ ಅಗತ್ಯವಿದೆ ಎಂದು ಮೆಟ್ರೊ ಪ್ರಯಾಣಿಕರೂ ಆಗಿರುವ ಐಟಿ ಉದ್ಯೋಗಿ ಪ್ರಜ್ವಲ್ ಕುಮಾರ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.