ಬೆಂಗಳೂರು: ಸಂಪೂರ್ಣ ಚಂದ್ರಗ್ರಹಣವು ಇದೇ ಭಾನುವಾರ ಸಂಭವಿಸಲಿದ್ದು, ಜವಾಹರಲಾಲ್ ನೆಹರೂ ತಾರಾಲಯ ಸೇರಿ ವಿವಿಧೆಡೆ ಗ್ರಹಣ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಇಲ್ಲಿ ವೀಕ್ಷಕರ ವೇದಿಕೆ ಕರ್ನಾಟಕ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್, ‘ಕರ್ನಾಟಕ ಸೇರಿದಂತೆ ದೇಶದಾದ್ಯಂತ ಈ ಗ್ರಹಣ ಗೋಚರಿಸಲಿದೆ. ಅಪರೂಪದ ಈ ಘಟನೆಯನ್ನು ಬರಿಗಣ್ಣಿನಿಂದ ಸುಲಭವಾಗಿ ವೀಕ್ಷಿಸಬಹುದು. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ನಡೆಯುವ ಈ ನೆರಳಿನ ಆಟವನ್ನು ಎಲ್ಲರೂ ಮನೆಯಿಂದ ಹೊರಬಂದು ಕಣ್ತುಂಬಿಕೊಳ್ಳಬಹುದು’ ಎಂದರು.
‘ಭಾನುವಾರ ರಾತ್ರಿ 9.57ರಿಂದ ಗ್ರಹಣ ಪ್ರಕ್ರಿಯೆ ಆರಂಭವಾಗಲಿದೆ. 11.01ರಿಂದ 12.23ರ ಅವಧಿಯಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಸೋಮವಾರ ಮುಂಜಾನೆ 2.25ಕ್ಕೆ ಅಂತ್ಯಗೊಳ್ಳುತ್ತದೆ. ಗ್ರಹಣದ ಸಮಯ ತಡ ರಾತ್ರಿವರೆಗೂ ಈ ಪ್ರಕ್ರಿಯೆಯನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ವಿವಿಧ ಸಂಸ್ಥೆಗಳು ಸಹ ಗ್ರಹಣ ವೀಕ್ಷಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಮುಂದಿನ ಸಂಪೂರ್ಣ ಚಂದ್ರಗ್ರಹಣವು 2028ರ ಡಿ.31ರಂದು ನಡೆಯಲಿದೆ’ ಎಂದು ಹೇಳಿದರು.
ಸಾರ್ವಜನಿಕ ಕಾರ್ಯಕ್ರಮ: ಗ್ರಹಣ ವೀಕ್ಷಣೆಗೆ ನಗರದ ವಿವಿಧೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಉಪನ್ಯಾಸ, ರಸಪ್ರಶ್ನೆ, ಗ್ರಹಣ ಮಾದರಿ ಪ್ರದರ್ಶನಗಳು ನಡೆಯಲಿವೆ. ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಭಾನುವಾರ ಸಂಜೆ 7 ಗಂಟೆಯಿಂದ ಗ್ರಹಣ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 200 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
ವಿಜಯನಗರದಲ್ಲಿ ಯಂಗ್ ಇನ್ನೋವೇಟರ್ಸ್ ಎಜುಕೇಷನಲ್ ಸರ್ವಿಸಸ್ ಸಂಸ್ಥೆ ರಾತ್ರಿ 9 ಗಂಟೆಯಿಂದ, ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಹಾಗೂ ಲಾಲ್‌ಬಾಗ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ರಾತ್ರಿ 8.30ರಿಂದ ಹಾಗೂ ರಾಜಾಜಿನಗರದಲ್ಲಿರುವ ಬ್ರೇಕಥ್ರೂ ಸೈನ್ಸ್ ಸೊಸೈಟಿ ಸಂಜೆ 7 ಗಂಟೆಯಿಂದ ಗ್ರಹಣ ವೀಕ್ಷಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.