ಬೆಂಗಳೂರು: ಮೋಡ ಕವಿದ ವಾತಾವರಣದ ನಡುವೆಯೂ ಚಂದ್ರಗ್ರಹಣವನ್ನು ನಗರದ ಜನರು ಭಾನುವಾರ ತಡರಾತ್ರಿವರೆಗೂ ಕೌತುಕದಿಂದ ಕಣ್ತುಂಬಿಕೊಂಡು ಸಂಭ್ರಮಿಸಿದರು.
ಗ್ರಹಣದ ಸಮಯದಲ್ಲಿ ಮನೆಯ ಆವರಣ, ರಸ್ತೆ, ಚಾವಣಿ ಮೇಲೆ ನಿಂತು, ಗ್ರಹಣ ಪ್ರಕ್ರಿಯೆಯನ್ನು ಮಕ್ಕಳು ಸೇರಿದಂತೆ ವಿವಿಧ ವಯೋಮಾನದವರು ವೀಕ್ಷಿಸಿದರು. ಜವಾಹರಲಾಲ್ ನೆಹರೂ ತಾರಾಲಯ ಸೇರಿ ವಿವಿಧೆಡೆ ಗ್ರಹಣ ವೀಕ್ಷಣೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗವಿಗಂಗಾಧರೇಶ್ವರ ಸೇರಿ ನಗರದ ವಿವಿಧ ದೇವಾಲಯಗಳಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿಲು ಮುಚ್ಚಲಾಯಿತು.
ವಿವಿಧ ಸಂಸ್ಥೆಗಳು ಸಹ ಗ್ರಹಣ ವೀಕ್ಷಣೆಗೆ ನಗರದ ವಿವಿಧೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಉಪನ್ಯಾಸ, ರಸಪ್ರಶ್ನೆ, ಗ್ರಹಣದ ಮಾದರಿ ಪ್ರದರ್ಶನಗಳು ನಡೆದವು. ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಭಾನುವಾರ ಸಂಜೆ ವೇಳೆಗೆ ನೂರಾರು ಮಂದಿ ಜಮಾಯಿಸಿದ್ದರು. ಗ್ರಹಣ ವೀಕ್ಷಣೆಗೆ ದೂರದರ್ಶಕಗಳನ್ನು ಇರಿಸಲಾಗಿತ್ತು. ಗ್ರಹಣ ಪ್ರಕ್ರಿಯೆ ಬಗ್ಗೆ ಸಹ ಇದೇ ವೇಳೆ ನೆರೆದಿದ್ದವರಿಗೆ ವಿವರಿಸಲಾಯಿತು.
ವಿಜಯನಗರದಲ್ಲಿ ಯಂಗ್ ಇನ್ನೋವೇಟರ್ಸ್ ಎಜುಕೇಷನಲ್ ಸರ್ವಿಸಸ್ ಸಂಸ್ಥೆ, ಕೋರಮಂಗಲದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಲಾಲ್‌ಬಾಗ್ ರಸ್ತೆಯಲ್ಲಿ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಹಾಗೂ ರಾಜಾಜಿನಗರದಲ್ಲಿ ಬ್ರೇಕಥ್ರೂ ಸೈನ್ಸ್ ಸೊಸೈಟಿ ಗ್ರಹಣ ವೀಕ್ಷಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.
ಆಹಾರ ಸೇವಿಸಿ ಜಾಗೃತಿ
ಹಣ್ಣು ಸಿಹಿ ಹೋಳಿಗೆ ಸಮೋಸ ಮೊಟ್ಟೆ ಬಿರಿಯಾನಿ ಸೇವಿಸುವ ಮೂಲಕ ಮೂಢನಂಬಿಕೆ ವಿರೋಧಿ ಒಕ್ಕೂಟ ಪ್ರಗತಿಪರ ಸಂಘಟನೆಗಳ ಸದಸ್ಯರು ಪುರಭವನದ ಮುಂಭಾಗದಲ್ಲಿ ಭಾನುವಾರ ಚಂದ್ರಗ್ರಹಣ ವೀಕ್ಷಿಸಿದರು.
‘ಸೂರ್ಯಗ್ರಹಣ ಚಂದ್ರಗ್ರಹಣ ಆಕಾಶಕಾಯಗಳ ಸಹಜ ನೈಸರ್ಗಿಕ ಪ್ರಕ್ರಿಯೆಗಳು. ಇಂತಹ ವೈಜ್ಞಾನಿಕ ಸನ್ನಿವೇಶಗಳನ್ನು ಮೂಢನಂಬಿಕೆಗಳ ಜತೆ ಬೆಸೆದು ಜನರನ್ನು ಹಾದಿ ತಪ್ಪಿಸಲಾಗುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಮೌಢ್ಯ ಬಿತ್ತಲಾಗುತ್ತಿದೆ. ಮೂಢನಂಬಿಕೆ ತೊಲಗಬೇಕು ವಿಜ್ಞಾನದ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಒಕ್ಕೂಟದ ಮುಖಂಡರಾದ ಟಿ. ನರಸಿಂಹಮೂರ್ತಿ ಎಚ್.ಸಿ. ಉಮೇಶ್ ಯುವರಾಜ್ ಈ. ಬಸವರಾಜು ಅಭಿಗೌಡ ನಾಗೇಶ್ ಅರಳಕುಪ್ಪೆ ಮಹಾದೇವಪ್ಪ ಹೇಳಿದರು.
ಜನರಿಗೂ ಆಹಾರ ಪದಾರ್ಥ ತುಂಪುಪಾನೀಯ ಕಾಫಿ ಹಂಚುವ ಮೂಲಕ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಜನಜಾಗೃತಿ ಮೂಡಿಸಿದರು.
ಚಂದ್ರಗ್ರಹಣದ ಕಾರಣ ಗವಿಗಂಗಾಧರೇಶ್ವರ ದೇವಸ್ಥಾನದ ಬಾಗಿಲನ್ನು ಭಾನುವಾರ ಬಂದ್ ಮಾಡಲಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.