ADVERTISEMENT

ಹೊರ ರಾಜ್ಯಗಳಲ್ಲಿ ಕಾರು ಕದ್ದು ಬೆಂಗಳೂರಿನಲ್ಲಿ ಮಾರಾಟ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:24 IST
Last Updated 28 ಜನವರಿ 2026, 15:24 IST
<div class="paragraphs"><p>ನಿಜಾಮ್‌ ,&nbsp;ಮೊಹಮ್ಮದ್ ಜಾಫರ್‌&nbsp;</p></div>

ನಿಜಾಮ್‌ , ಮೊಹಮ್ಮದ್ ಜಾಫರ್‌ 

   

ಬೆಂಗಳೂರು: ನವದೆಹಲಿ, ಮುಂಬೈ ಸೇರಿದಂತೆ ದೇಶದ ಬೇರೆ ಬೇರೆ ಕಡೆಗಳಲ್ಲಿ ದುಬಾರಿ ಬೆಲೆಯ ಕಾರುಗಳನ್ನು ಕಳ್ಳತನ ಮಾಡಿಕೊಂಡು ಬಂದು, ಮಧ್ಯವರ್ತಿಗಳ ಮೂಲಕ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಗೋವಿಂದಪುರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.  

ಇಲ್ಲಿನ ಫ್ರೇಜರ್‌ಟೌನ್‌ ನಿವಾಸಿ ಸೈಯದ್ ನಿಜಾಮ್‌ (37) ಹಾಗೂ ತೆಲಂಗಾಣದ ಮೊಹಮ್ಮದ್ ಮುಜಾಫರ್ (26) ಬಂಧಿತರು.

ADVERTISEMENT

ಬಂಧಿತರಿಂದ ₹2.31 ಕೋಟಿ ಮೌಲ್ಯದ 9 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಹೇಳಿದರು.

ಡಿ.31ರಂದು ಗೋವಿಂದಪುರ 10ನೇ ಕ್ರಾಸ್‌ ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ಸ್ಕೂಟರ್ ಕಳ್ಳತನ ಆಗಿತ್ತು. ಸ್ಕೂಟರ್ ಮಾಲೀಕರು ನೀಡಿದ ದೂರು ಆಧರಿಸಿ, ತನಿಖೆ ನಡೆಸಲಾಯಿತು. ಠಾಣಾ ವ್ಯಾ‍ಪ್ತಿಯ ಇಂದಿರಾ ಕ್ಯಾಂಟೀನ್‌ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಸೈಯದ್ ನಿಜಾಮ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕದ್ದ ವಾಹನಗಳ ಮಾರಾಟದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದ. ಆತ ನೀಡಿದ ಸುಳಿವು ಆಧರಿಸಿ, ನವದೆಹಲಿಯಲ್ಲಿ ಮೊಹಮ್ಮದ್ ಮುಜಾಫರ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ನವದೆಹಲಿಯ ವ್ಯಕ್ತಿಯೊಬ್ಬ ದುಬಾರಿ ಬೆಲೆಯ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ಕಾರುಗಳ ಮಾರಾಟ ಜಾಲದಲ್ಲಿ ಸೈಯದ್ ನಿಜಾಮ್‌ ಹಾಗೂ ಮೊಹಮ್ಮದ್ ಮುಜಾಫರ್ ಅವರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾರಾಟ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ನವದೆಹಲಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಎಂಟು ಹಾಗೂ ನೊಯ್ಡಾ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣವು ಪತ್ತೆ ಆಗಿದೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.