ಬೆಂಗಳೂರು: ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದ ತೆರಿಗೆ ತಪ್ಪಿಸಿ ಸಂಚರಿಸುತ್ತಿದ್ದ ಎರಡು ಕಾರುಗಳ ಮಾಲೀಕರಿಂದ ದಂಡ ಸಹಿತ ತೆರಿಗೆಯನ್ನು ಸಾರಿಗೆ ಅಧಿಕಾರಿಗಳು ವಸೂಲಿ ಮಾಡಿದ್ದಾರೆ.
ಪುದುಚೇರಿಯಲ್ಲಿ ನೋಂದಣಿಯಾಗಿದ್ದ ಮರ್ಸಿಡಿಸ್ ಬೆಂಜ್ ಮತ್ತು ಜಾರ್ಖಂಡ್‌ನಲ್ಲಿ ನೋಂದಣಿಯಾಗಿದ್ದ ಫೆರಾರಿ 812 ಸೂಪರ್ ಫಾಸ್ಟ್ ಕಾರು ರಾಜ್ಯದಲ್ಲಿ ಓಡಾಡುತ್ತಿರುವುದನ್ನು ಸಾರಿಗೆ ಅಧಿಕಾರಿಗಳು ಕಳೆದ ಮಾರ್ಚ್‌ನಲ್ಲೇ ಪತ್ತೆ ಹಚ್ಚಿ ನೋಟಿಸ್ ನೀಡಿದ್ದರು. ಆದರೆ, ಕಾರು ತಂದು ಮೂರು ತಿಂಗಳು ಆಗಿರುವುದು ಎಂದು ಮಾಲೀಕರು ಉತ್ತರಿಸಿದ್ದರು.
ಕಾರು ಎಷ್ಟು ಸಮಯದಿಂದ ಎಲ್ಲೆಲ್ಲಿ ಓಡಾಡಿದೆ ಎಂಬುದನ್ನು ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಿಂದ ಮಾಹಿತಿ ಪಡೆದಾಗ 12 ತಿಂಗಳು ದಾಟಿರುವುದು ಗೊತ್ತಾಗಿದೆ. ಅದರಂತೆ ಶುಕ್ರವಾರ ಕಾರ್ಯಾಚರಣೆ ನಡೆಸಿ ದಂಡ ಸಹಿತ ತೆರಿಗೆ ಪಾವತಿಸುವಂತೆ ತಿಳಿಸಿದ್ದರು. ಕಾರು ಮಾಲೀಕರಾಗಿರುವ ಈಸ್ಟ್ ಪಾಯಿಂಟ್ ಗ್ರೂಪ್ ಸಿಇಒ ರಾಜೀವ್ ಗೌಡ ಅವರು ಒಂದು ಕಾರಿಗೆ ₹37.03 ಲಕ್ಷ, ಇನ್ನೊಂದು ಕಾರಿಗೆ ₹61.94 ಲಕ್ಷ ಪಾವತಿಸಿದರು.
ಜಯನಗರ ಆರ್‌ಟಿಒ ವಿ.ಪಿ. ರಮೇಶ್, ಕೇಂದ್ರ ಆರ್‌ಟಿಒ ದೀಪಕ್, ಸಿಬ್ಬಂದಿ ಗಿರಿಧರ್ ಟಿ.ಎಸ್., ಅಸಾದುಲ್ಲ ಬೇಗ್, ಸೌಮ್ಯಾ ಎಚ್.ಆರ್., ಎ.ಎ. ಖಾನ್, ಕೆಂಪರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.