ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ಆಟೊಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರದ ನಿವಾಸಿ ನಾಗೇಶ್ ಅಲಿಯಾಸ್ ವಿನಿತ್ (22) ಬಂಧಿತ ಆರೋಪಿ.
ಆರೋಪಿಯಿಂದ ₹33.35 ಲಕ್ಷ ಮೌಲ್ಯದ 208 ಗ್ರಾಂ ಚಿನ್ನಾಭರಣ, 358 ಗ್ರಾಂ ಬೆಳ್ಳಿಯ ಸಾಮಗ್ರಿ, ಎರಡು ಆಟೊಗಳು, ಎರಡು ಕ್ಯಾಮೆರಾ ಹಾಗೂ 6 ಲೆನ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಹೆಗ್ಗನಹಳ್ಳಿ ಕ್ರಾಸ್‌ನಲ್ಲಿರುವ ಮನೆಯೊಂದರ ಎದುರು ನಿಲುಗಡೆ ಮಾಡಿದ್ದ ಆಟೊವೊಂದನ್ನು ಆರೋಪಿ ಇತ್ತೀಚೆಗೆ ಕಳ್ಳತನ ಮಾಡಿದ್ದ. ಈ ಸಂಬಂಧ ಆಟೊ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಘಟನಾ ಸ್ಥಳದ ಸಿ.ಸಿ.ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತ್ತು. ನಂತರ, ಆತನ ಬಗ್ಗೆ ಮಾಹಿತಿ ಸಂಗ್ರಹಿಸಿ ಲಗ್ಗೆರೆ ಮುಖ್ಯರಸ್ತೆಯಲ್ಲಿ ಇರುವ ಆಲದಮರ ವೃತ್ತದ ಬಳಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಕಳವು ಮಾಡಿದ ಆಟೊಗಳಲ್ಲಿ ಸುತ್ತಾಟ ನಡೆಸುತ್ತಿದ್ದ ಆರೋಪಿ, ಮನೆಗಳಿಗೆ ನುಗ್ಗಿ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ, ಮಾದನಾಯನಕಹಳ್ಳಿ ಠಾಣಾ ವ್ಯಾಪ್ತಿಯ ಮನೆಗಳಲ್ಲಿ ಆರೋಪಿ ಕಳ್ಳತನ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.