ADVERTISEMENT

ಕೈ ತಪ್ಪಿದ ಪರಿಷತ್‌ ಟಿಕೆಟ್‌: 24ಕ್ಕೆ ಎಂ.ಆರ್‌. ಸೀತಾರಾಮ್ ಬೆಂಬಲಿಗರ ಸಭೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 20:55 IST
Last Updated 20 ಜೂನ್ 2022, 20:55 IST
ಎಂ.ಆರ್‌. ಸೀತಾರಾಮ್
ಎಂ.ಆರ್‌. ಸೀತಾರಾಮ್   

ಬೆಂಗಳೂರು: ವಿಧಾನ ಪರಿಷತ್‌ ಟಿಕೆಟ್‌ ಕೈ ತಪ್ಪಿದ ಕಾರಣಕ್ಕೆ ಮುನಿಸಿ ಕೊಂಡಿರುವ ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್‌. ಸೀತಾರಾಮ್, ಇದೇ 24ರಂದು ತಮ್ಮ ಬೆಂಬಲಿಗರ ಜೊತೆ ಸಮಾಲೋಚಿಸಿ ಮುಂದಿನ ರಾಜಕೀಯ ನಡೆ ತೀರ್ಮಾನಿಸಲು ನಿರ್ಧರಿಸಿದ್ದಾರೆ.

ಅರಮನೆ ಮೈದಾನದ ‘ವೈಟ್‌ ಪೆಟಲ್ಸ್‌ ಗಾರ್ಡೆನಿಯಾ’ ಆವರಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೆಂಬಲಿಗರಿಂದ ಸಲಹೆ ಪಡೆಯಲು ಅವರು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಬೆಂಬಲಿಗರನ್ನು ಉದ್ದೇಶಿಸಿ ಪತ್ರ ಬರೆದಿರುವ ಅವರು, ‘ಪಕ್ಷಕ್ಕಾಗಿ ದುಡಿದ ನನ್ನ ಸೇವೆಯನ್ನು ಪರಿಗಣಿಸದೆ ಕೆಲವು ಸ್ವಾರ್ಥ, ಪಟ್ಟಭದ್ರ ಶಕ್ತಿಗಳು ಮಾಡುತ್ತಿರುವ ಕುಟಿಲ ರಾಜಕೀಯದ ಕುರಿತು ತಮ್ಮೊಂದಿಗೆ ಚರ್ಚಿಸಲು ಉದ್ದೇಶಿಸಿದ್ದೇನೆ’ ಎಂದಿದ್ದಾರೆ.

ADVERTISEMENT

ಅಲ್ಲದೆ ಪತ್ರದಲ್ಲಿ, ‘1996ರಿಂದ 2002ರವರೆಗೆ ಕೆಪಿಸಿಸಿ ಖಜಾಂಚಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. 1999 ಮತ್ತು 2002ರಲ್ಲಿ ಮಲ್ಲೇಶ್ವರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದೆ. ಆದರೆ, 2008ರಲ್ಲಿ ಸ್ವಪಕ್ಷೀಯರ ಒಳಸಂಚಿನಿಂದ ಟಿಕೆಟ್‌ ತಪ್ಪಿತ್ತು. ಕೆಲವು ನಾಯಕರ ಚಿತಾವಣೆಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ (2009) ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ನಿರಾಕರಿಸಲಾಗಿತ್ತು. ವಿಧಾನಸಭೆಯಿಂದ ವಿಧಾನಪರಿಷತ್‌ಗೆ 2012ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಮತಗಳು ಕಡಿಮೆ ಇದ್ದರೂ ನಾಲ್ಕನೇ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಆದರೆ, ಪ್ರಜ್ಞಾವಂತ ಶಾಸಕರು ಕೈಹಿಡಿದ ಕಾರಣ, ಪರಿಷತ್‌ಗೆ ಆಯ್ಕೆಯಾಗಿ ಸಚಿವನೂ ಆದೆ. 2017ರಲ್ಲಿ ಪರಿಷತ್‌ ಸಭಾ ನಾಯಕನಾಗಿದ್ದೆ. 2018 ಮತ್ತು 2020ರಲ್ಲಿ ವಿಧಾನ ಪರಿಷತ್‌ ಟಿಕೆಟ್‌ ನಿರಾಕರಿಸಲಾಗಿತ್ತು. ಇದೇ ಮೇ ತಿಂಗಳಲ್ಲಿ ಪಕ್ಷದ ರಾಜ್ಯ ನಾಯಕತ್ವ ನನ್ನ ಹೆಸರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲು ಶಿಫಾರಸು ಮಾಡಿದ್ದರೂ ಪಿತೂರಿ ನಡೆಸಿ ಕೊನೆಕ್ಷಣದಲ್ಲಿ ಮತ್ತೆ ಟಿಕೆಟ್‌ ನಿರಾಕರಿಸಲಾಗಿದೆ’ ಎಂದೂ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.