ADVERTISEMENT

ಯೂಟ್ಯೂಬ್ ನೋಡಿ ಯಂತ್ರ ಮಾರ್ಪಾಡು: ತೂಕದಲ್ಲಿ ವಂಚನೆ

ಅಂಗಡಿಗಳ ಮೇಲೆ ಪೊಲೀಸರ ದಾಳಿ l 17 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 20:03 IST
Last Updated 18 ಮಾರ್ಚ್ 2023, 20:03 IST
   

ಬೆಂಗಳೂರು: ತೂಕದ ಯಂತ್ರಗಳನ್ನು ರಿಮೋಟ್ ಮೂಲಕ ನಿಯಂತ್ರಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ ಹಲವು ಅಂಗಡಿಗಳ ಮೇಲೆ ಪಶ್ಚಿಮ ವಿಭಾಗದ ಪೊಲೀಸರು ದಾಳಿ ಮಾಡಿದ್ದು, 17 ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಮಾಕ್ಷಿಪಾಳ್ಯದ ಸೋಮಶೇಖರ್ (33), ಬಾಗಲಗುಂಟೆಯ ಬಿ. ನವೀನ್‌ಕುಮಾರ್ (30), ಮಾರುತಿನಗರದ ವಿನೇಶ್ ಪಟೇಲ್ (22), ಕಾವೇರಿಪುರದ ಕೆ. ಲೋಕೇಶ್ (39), ಚಂದ್ರಶೇಖರ್ (41), ಅನ್ನಪೂರ್ಣೇಶ್ವರಿನಗರದ ರಾಜೇಶ್‌ಕುಮಾರ್ (43), ಗೊಲ್ಲರಹಟ್ಟಿಯ ವ್ಯಾಟರಾಯನ್ (42), ನಾಗರಬಾವಿಯ ಮೇಘನಾಧಮ್ (38), ಸುಂಕದಕಟ್ಟೆಯ ಎಸ್.ಆರ್. ಲೋಕೇಶ್ (24), ಅನಂತಯ್ಯ (44), ಹೆಗ್ಗನಹಳ್ಳಿಯ ಗಂಗಾಧರ್ (32), ವಿಶ್ವನಾಥ್ (54), ಪಟ್ಟೆಗಾರಪಾಳ್ಯದ ರಂಗನಾಥ್ (38), ಶಿವಣ್ಣ (51), ಪ್ರಕಾಶನಗರದ ಸನಾವುಲ್ಲಾ (65), ಚಿಕ್ಕಬಸ್ತಿಯ ಮಹಮ್ಮದ್ ಈಶಾಕ್ ಅಲಿಯಾಸ್ ಫಯಾಜ್ (30) ಹಾಗೂ ಉಲ್ಲಾಳು ಉಪನಗರದ ಮಧುಸೂದನ್ (24) ಬಂಧಿತರು.

‘ಹಳೇ ಪತ್ರಿಕೆ ಖರೀದಿ ಮಳಿಗೆಯ ತೂಕದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ತನಿಖೆ ಕೈಗೊಂಡು ನ್ಯಾಯಬೆಲೆ, ಗುಜರಿ, ಮಾಂಸ, ಮೀನು ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಲಾಯಿತು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ADVERTISEMENT

‘ಪ್ರಮುಖ ಆರೋಪಿ ಸೋಮಶೇಖರ್ ಹಾಗೂ ನವೀನ್‌ಕುಮಾರ್, ತೂಕದ ಯಂತ್ರಗಳ ಸೇವೆ ಸಂಬಂಧ ಕಾನೂನು ಮಾಪಕ ಇಲಾಖೆಯಿಂದ ಪರವಾನಗಿ ಪಡೆದಿದ್ದರು. ಯಂತ್ರದೊಳಗೆ ಉಪಕರಣವೊಂದನ್ನು ಅಳವಡಿಸಿ ರಿಮೋಟ್ ಮೂಲಕ ತೂಕ ನಿಯಂತ್ರಿಸುವ ಸಂಗತಿಯನ್ನು ಯೂಟ್ಯೂಬ್ ನೋಡಿ ಕಲಿತಿದ್ದರು.’

‘ಯಂತ್ರಗಳ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಚಿಪ್ನಲ್ಲಿ ಅಕ್ರಮವಾಗಿ ಬದಲಾವಣೆ ಮಾಡುತ್ತಿದ್ದ ಆರೋಪಿಗಳು, ಯಂತ್ರದೊಳಗೆ ಚಿಕ್ಕ ಉಪಕರಣ ಅಳವಡಿಸುತ್ತಿದ್ದರು.
ಅಂಥ ಯಂತ್ರಗಳು ರಿಮೋಟ್‌ ಮೂಲಕ ಕಾರ್ಯನಿರ್ವಹಿಸುವಂತೆ ಮಾಡುತ್ತಿದ್ದರು. ಗ್ರಾಹಕರ ಅರಿವಿಗೆ ಬಾರದಂತೆ ಯಂತ್ರದಲ್ಲಿರುವ ಅಂಕಿ–ಸಂಖ್ಯೆಯನ್ನೂ ಬದಲಾಯಿಸಲು ಅವಕಾಶವಿತ್ತು’ ಎಂದು ಹೇಳಿದರು.

ವಂಚನೆ ಮಾಡುತ್ತಿದ್ದದ್ದು ಹೇಗೆ?
‘ಅಂಗಡಿ ಮಾಲೀಕರು, ತಮ್ಮ ತೂಕದ ಯಂತ್ರಗಳನ್ನು ಆರೋಪಿಗಳಾದ ಸೋಮಶೇಖರ್ ಹಾಗೂ ನವೀನ್‌ಕುಮಾರ್ ಬಳಿ ನೀಡುತ್ತಿದ್ದರು. ₹ 5 ಸಾವಿರದಿಂದ ₹ 10 ಸಾವಿರ ಕೊಟ್ಟು, ತೂಕದ ಯಂತ್ರಗಳನ್ನು ಮಾರ್ಪಾಡು ಮಾಡಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಯಾವುದಾದರೂ ವಸ್ತುವನ್ನು ತೂಕ ಮಾಡುವಾಗ ರಿಮೋಟ್ ಮೂಲಕ ಅಂಕಿ–ಸಂಖ್ಯೆಗಳನ್ನು ನಿಗದಿಪಡಿಸಬಹುದಿತ್ತು. ತೂಕ ಮಾಡುವ ಸಂದರ್ಭದಲ್ಲಿ ಅಂಗಡಿ ಮಾಲೀಕರು, ಗ್ರಾಹಕರಿಗೆ ತಿಳಿಯದಂತೆ ಯಂತ್ರದ ಕೆಳಗಿರುವ ರಿಮೋಟ್ ಒತ್ತುತ್ತಿದ್ದರು. ಅವರ ಪ್ರಕಾರವೇ ತೂಕದ ಪ್ರಮಾಣ ನಿರ್ಧಾರವಾಗುತ್ತಿತ್ತು’ ಎಂದು ತಿಳಿಸಿದರು.

‘ಒಂದು ವಸ್ತುವಿನ ತೂಕ 1,000 ಗ್ರಾಂ ಎಂಬುದಾಗಿ ಯಂತ್ರ ತೋರಿಸುತ್ತಿತ್ತು. ಆದರೆ, ಆ ವಸ್ತುವಿನ ನೈಜ ಪ್ರಮಾಣ 700 ಗ್ರಾಂನಿಂದ 900 ಗ್ರಾಂ ಮಾತ್ರ ಇರುತ್ತಿತ್ತು.’

‘ನ್ಯಾಯಬೆಲೆ ಅಂಗಡಿಗಳಲ್ಲಿ 80 ಕೆ.ಜಿ ತೂಕದ ವಸ್ತುವನ್ನು 100 ಕೆ.ಜಿ ಎಂದು ತೋರಿಸುತ್ತಿತ್ತು. ಗುಜರಿ ಅಂಗಡಿಗೆ ಗ್ರಾಹಕರು ತರುತ್ತಿದ್ದ ವಸ್ತುವಿನ ತೂಕ 10 ಕೆ.ಜಿ ಇದ್ದರೆ, 6 ಕೆ.ಜಿಯಿಂದ 8 ಕೆ.ಜಿ ಎಂಬುದಾಗಿ ತೋರಿಸುತ್ತಿತ್ತು’ ಎಂದು ಪೊಲೀಸರು ಹೇಳಿದರು.

‘ಪ್ರಮುಖ ಆರೋಪಿಗಳು ಹಲವು ವರ್ಷಗಳಿಂದ ತೂಕದ ಯಂತ್ರ ಬದಲಾಯಿಸುತ್ತಿದ್ದರು. ಇದರ ಜೊತೆ ಸೇರಿ ಅಂಗಡಿಗಳ ಮಾಲೀಕರು, ತೂಕದಲ್ಲಿ ಜನರಿಗೆ ವಂಚಿಸುತ್ತಿದ್ದರು’ ಎಂದು ತಿಳಿಸಿದರು.

‘ಇಲಾಖೆಯ ಅಧಿಕಾರಿಗಳ ಮೌನ’
‘ತೂಕದಲ್ಲಿ ವ್ಯತ್ಯಾಸವಾಗುತ್ತಿದ್ದ ಸಂಗತಿ ಕಾನೂನು ಮಾಪಕ ಇಲಾಖೆಯ ಕೆಲ ಅಧಿಕಾರಿಗಳಿಗೆ ಗೊತ್ತಿತ್ತು. ಆದರೂ, ಕ್ರಮಕೈಗೊಳ್ಳದೆ ಮೌನವಹಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸೋಮಶೇಖರ್ ಹಾಗೂ ನವೀನ್‌ಕುಮಾರ್‌ ರೀತಿಯಲ್ಲಿ ತೂಕದ ಯಂತ್ರ ಮಾರ್ಪಾಡು ಮಾಡುವ 25ಕ್ಕೂ ಹೆಚ್ಚು ಮಂದಿ ನಗರದಲ್ಲಿದ್ದಾರೆ. ಈ ಬಗ್ಗೆ ಆರೋಪಿಗಳೇ ಬಾಯ್ಬಿಟ್ಟಿದ್ದಾರೆ. ಅವರೆಲ್ಲರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.