ADVERTISEMENT

ಮದ್ದೂರಮ್ಮ ದೇವಿ ಜಾತ್ರಾ ದುರಂತ: ಇಬ್ಬರು ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 16:13 IST
Last Updated 27 ಮಾರ್ಚ್ 2025, 16:13 IST
ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ಜಾತ್ರೆಯಲ್ಲಿ ಕುರ್ಜು(ತೇರು) ನೆಲಕ್ಕುರುಳಿರುವುದು
ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ಜಾತ್ರೆಯಲ್ಲಿ ಕುರ್ಜು(ತೇರು) ನೆಲಕ್ಕುರುಳಿರುವುದು   

ಬೆಂಗಳೂರು: ಮದ್ದೂರಮ್ಮ ಜಾತ್ರಾ ಮಹೋತ್ಸವದಲ್ಲಿ ತೇರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷಕ ಪ್ರಶಾಂತ್‌ ಹಾಗೂ ಗ್ರಾಮ ಆಡಳಿತಾಧಿಕಾರಿ ಡಿ. ಕಾರ್ತಿಕ್ ಅವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.

ಆನೇಕಲ್ ತಾಲ್ಲೂಕು ಹುಸ್ಕೂರು ಗ್ರಾಮದಲ್ಲಿ ಮಾರ್ಚ್‌ 22ರಂದು ನಡೆದ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವದ ತೇರು ಬಿದ್ದು ಇಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ತಡೆಯಲು ಸ್ಥಳದಲ್ಲಿದ್ದ ಕಂದಾಯ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಆನೇಕಲ್‌ ತಾಲ್ಲೂಕು ತಹಶೀಲ್ದಾರ್‌ ನೀಡಿದ್ದ ವರದಿ ಆಧಾರದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಸರ್ಜಾಪುರ ಹೋಬಳಿಯ ಹುನ್ನೂರು ವೃತ್ತದ ರಾಜಸ್ವ ನಿರೀಕ್ಷಕ ಪ್ರಶಾಂತ್ ಅವರನ್ನು ಪೂರ್ವ ತಾಲ್ಲೂಕು ಕೆ.ಆರ್.ಪುರ ವೃತ್ತಕ್ಕೆ, ಹುಸ್ಕೂರು ವೃತ್ತದ ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಅವರನ್ನು ಮಾರತ್ತಹಳ್ಳಿ ಹೋಬಳಿಯ ಎಚ್‌ಎಎಲ್ ಸ್ಯಾನಿಟರಿ ಬೋರ್ಡ್ ವೃತ್ತಕ್ಕೆ ಸ್ಥಳ ನಿಯುಕ್ತಿಗೊಳಿಸಿದ್ದಾರೆ.

ADVERTISEMENT

‘ಈ ಘಟನೆಯಲ್ಲಿ ಕರ್ತವ್ಯಲೋಪ ಎಸಗಿರುವ ಹೆಬ್ಬಗೋಡಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಸಂಬಂಧಪಟ್ಟ ಪೊಲೀಸ್‌ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ನಗರ ಜಿಲ್ಲಾಧಿಕಾರಿ ಜಗದೀಶ್‌ ಅವರು ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.