ADVERTISEMENT

ಮದ್ದೂರಮ್ಮ ಮೈದಾನ ಅಭಿವೃದ್ಧಿ ವಿಚಾರ: ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 21:40 IST
Last Updated 5 ಡಿಸೆಂಬರ್ 2022, 21:40 IST
ರವಿ ಸುಬ್ರಮಣ್ಯ
ರವಿ ಸುಬ್ರಮಣ್ಯ   

ಬೆಂಗಳೂರು:ಬಸವನಗುಡಿಯ ಶ್ರೀನಗರದ ಮದ್ದೂರಮ್ಮ ಮೈದಾನ ಅಭಿವೃದ್ಧಿ ಹಾಗೂ ಕಾಲೇಜು ಕಟ್ಟಡ ನಿರ್ಮಾಣ ಕುರಿತಂತೆ ಶಾಸಕ ರವಿ ಸುಬ್ರಮಣ್ಯ ಹಾಗೂ ಕೆಪಿಸಿಸಿ ವಕ್ತಾರ ಡಾ. ಶಂಕರ್ ಗುಹಾ ನಡುವೆ ಸೋಮವಾರ ಮಾತಿನ ಚಕಮಕಿ ನಡೆಯಿತು.

ಮೈದಾನದ ಅಭಿವೃದ್ಧಿ ಹಾಗೂ ಪಕ್ಕದಲ್ಲಿರುವ ಬಿಬಿಎಂಪಿ ಜಾಗದಲ್ಲಿ ಪದವಿ ಕಾಲೇಜು ನಿರ್ಮಾಣಕ್ಕೆ ರವಿ ಸುಬ್ರಮಣ್ಯ ಅವರು ಸೋಮವಾರ ಬೆಳಿಗ್ಗೆ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ‘ಮೈದಾನದಲ್ಲಿ ಕಟ್ಟಡ ಕಟ್ಟುವುದು ಬೇಡ’ ಎಂದು ಶಂಕರ್‌ ಆಗ್ರಹಿಸಿದರು. ಮಾತಿನ ಚಕಮಕಿ ನಡೆದು, ಪೊಲೀಸರು ಶಂಕರ್‌ ಅವರನ್ನು ಮೈದಾನದಿಂದ ಹೊರಕ್ಕೆ ಕಳುಹಿಸಿದರು.

‘ಬಸವನಗುಡಿಯ ಈ ಭಾಗದಲ್ಲಿ ಪದವಿ ಕಾಲೇಜು ಇಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಬಿ.ಕಾಂ ಹಾಗೂ ಬಿಸಿಎ ಪದವಿ ಕಾಲೇಜು ಆರಂಭಿಸಲಾಗುತ್ತಿದೆ. ಶಾಲೆಯ ಕಟ್ಟಡದಲ್ಲಿ ಈ ತರಗತಿಗಳು ನಡೆಯುತ್ತಿವೆ. ಅದರ ಬದಲು ಮೈದಾನದ ಪಕ್ಕದಲ್ಲೇ ಇರುವ ಬಿಬಿಎಂಪಿ ಜಾಗದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಈ ಮೈದಾನವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ರವಿಸುಬ್ರಮಣ್ಯ ವಿವರ ನೀಡಿದರು.

ADVERTISEMENT

‘ಮಕ್ಕಳು ಆಟ ಆಡುತ್ತಿರುವ ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಆಟದ ಮೈದಾನವನ್ನು ಬಿಟ್ಟು ಬೇರೆ ಕಡೆ ಕಟ್ಟಡ ಕಟ್ಟಬಹುದಲ್ಲ ಎಂದಿದ್ದಕ್ಕೆ ಶಾಸಕರು ಸಿಟ್ಟಾದರು. ಜೆಸಿಬಿಯನ್ನು ತರಿಸಿ ಮೈದಾನದ ಗಿಡಮರಗಳನ್ನು ಕೀಳಲು ಪ್ರಾರಂಭಿಸಿದರು. ಸ್ಥಳೀಯರಿಗೆ ಸುತ್ತಮುತ್ತಲೂ ಯಾವುದೇ ಮೈದಾನ ಇಲ್ಲದಿರುವುದರಿಂದ ಇದೊಂದೇ ಮೈದಾನವನ್ನು ಅವಲಂಬಿಸಿದ್ದಾರೆ’ ಎಂದು ಶಂಕರ್‌ ಹೇಳಿದರು.

‘ನಾವು ಅವರ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಸಾರ್ವಜನಿಕರಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ. ಅಗತ್ಯ ಬಿದ್ದರೆ ನ್ಯಾಯಾಲಯದ ಮೆಟ್ಟಿಲನ್ನು ಏರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.