ಬೆಂಗಳೂರು: ‘ಯಾವುದೇ ಪಕ್ಷಕ್ಕೆ ಸೇರಿದರೂ, ತಾರತಮ್ಯ ಮಾಡದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ನಮ್ಮ ಕರ್ತವ್ಯ. ಪಕ್ಷಾತೀತವಾಗಿ ಸಮಸ್ಯೆಗಳನ್ನು ಯಾರೇ ಗಮನಕ್ಕೆ ತಂದರೂ ಬಗೆಹರಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಸೊರಬ ಬೆಂಗಳೂರು ನಿವಾಸಿಗಳ ‘ಟೀಮ್ ಸಮ್ಮಿಲನ’ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಸೊರಬ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಮ್ಮ ಕ್ಷೇತ್ರದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಉದ್ದೇಶದಿಂದ ಎಲ್ಲ ಕೆಲಸವನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಇದೊಂದು ಸ್ಮರಣೀಯ ಕಾರ್ಯಕ್ರಮ. ಇದನ್ನು ಹೀಗೆಯೇ ಮುಂದುವರಿಸಲಾಗುವುದು’ ಎಂದರು.
‘ನಾನು ಎಷ್ಟೇ ಒಳ್ಳೆಯದನ್ನು ಮಾಡಿದರೂ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಾರೆ. ಇತ್ತೀಚೆಗೆ ಸಿಗಂದೂರು ವಿಚಾರದಲ್ಲೂ ಹಾಗೇ ಆಯಿತು. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಮುಂದೆ ಸಿಗಂದೂರು ಚೌಡೇಶ್ವರಿಯೇ ಬುದ್ದಿ ಕಲಿಸುತ್ತಾಳೆ’ ಎಂದರು.
ಕಾರ್ಯಕ್ರಮದಲ್ಲಿ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹15 ಸಾವಿರ ನಗದು, ಫಲಕ ನೀಡಿ ಗೌರವಿಸಲಾಯಿತು.
ಸೊರಬ ನಿವಾಸಿಗಳ ಟೀಮ್ ಸಮ್ಮೀಲನದ ಮುಖ್ಯಸ್ಥ ಏಕಾಂತಪ್ಪ ಕುಮ್ಮೂರು, ವಕೀಲ ಕೇಶವಮೂರ್ತಿ ಹಾಲಗಳಲೆ, ದತ್ತಾತ್ರೇಯ ಬಿದರಗೆರೆ, ಕಲ್ಯಾಣ ಕುಮಾರ್ ತವನಂದಿ, ಶೇಖರಪ್ಪ ಹರೂರು, ಮುಕುಂದ ಹಿರೇಇಡಗೋಡು, ಗಣೇಶ್ ಹುಲ್ತಿಕೊಪ್ಪ, ಗಣಪತಿ ಹಳೇ ಸೊರಬ, ಪೀತಾಂಬರ ಕೆರೆಕೊಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.