ಬೆಂಗಳೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಒಕ್ಕೂಟದ ಸದಸ್ಯರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕಲಬುರಗಿಯಲ್ಲಿ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದ 26 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕಾವು ತೀವ್ರ ಸ್ವರೂಪ ಪಡೆದುಕೊಂಡಿತ್ತು. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎ.ನಾರಾಯಣಸ್ವಾಮಿ, ‘ಒಳಮೀಸಲಾತಿಯನ್ನು ಶೀಘ್ರದಲ್ಲೇ ಜಾರಿ ಮಾಡದಿದ್ದರೆ ಸರ್ಕಾರದ ವಿರುದ್ಧ ಮಾದಿಗರು ಅಸಹಕಾರ ಚಳವಳಿ ನಡೆಸಲಿದ್ದೇವೆ. ಓಲೈಕೆಗೆ ಬಗ್ಗುವುದಿಲ್ಲ’ ಎಂದು ಎಚ್ಚರಿಸಿದರು.
‘ಮಾದಿಗರಿಗೆ ನ್ಯಾಯ ಲಭಿಸಿಲ್ಲ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸುತ್ತೇವೆ’ ಎಂದು ಎಚ್ಚರಿಸಿದರು.
‘ಹಲವು ವರ್ಷಗಳಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಿ ಒಳಮೀಸಲಾತಿ ಕಲ್ಪಿಸಬೇಕು. ಒಳಮೀಸಲಾತಿ ಜಾರಿಯಾಗದೇ ಇದ್ದರೆ ಮಾದಿಗ ಸಮುದಾಯದ ಜನರು ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ’ ಎಂದು ಎಚ್ಚರಿಸಿದರು.
ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ಸರ್ಕಾರವು ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲವೇ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಜಾಗ ಖಾಲಿ ಮಾಡಲಿ’ ಎಂದರು.
ಬಿಜೆಪಿ ರಾಜ್ಯ ವಕ್ತಾರ ಎಚ್.ವೆಂಕಟೇಶ್ ದೊಡ್ಡೇರಿ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೀದರ್‌ನಲ್ಲಿ ಪ್ರತಿಭಟನಕಾರರು ಕೇಶಮುಂಡನ, ಅರೆಬೆತ್ತಲೆ ಮೆರವಣಿಗೆ, ಮಾನವ ಸರಪಳಿ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ಬಿ.ಆರ್. ಅಂಬೇಡ್ಕರ್ ವೃತ್ತ ಸಮೀಪದ ಪ್ರವಾಸಿ ಮಂದಿರದಲ್ಲಿ ಸೇರಿದ ಕಾರ್ಯಕರ್ತರು ಅಲ್ಲಿಂದ ಅಂಬೇಡ್ಕರ್ ವೃತ್ತದ ವರೆಗೆ ರ್‍ಯಾಲಿ ನಡೆಸಿ, ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ರಸ್ತೆತಡೆ ನಡೆಸಿದರು.
ಕೊಪ್ಪಳದಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಹೋರಾಟಗಾರರು ಘೋಷಣೆ ಕೂಗಿದರು. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.