ADVERTISEMENT

ಆರ್‌ಎಸ್‌ಎಸ್‌ ಜತೆ ಗಂಭೀರ ಚರ್ಚೆ: ಸಚಿವ ಎ.ನಾರಾಯಣ ಸ್ವಾಮಿ

ಸದಾಶಿವ ಆಯೋಗದ ವರದಿ ಜಾರಿಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 13 ಮೇ 2022, 20:03 IST
Last Updated 13 ಮೇ 2022, 20:03 IST
ವಿಶ್ವ ಮಾದಿಗ ದಿನದ ಅಂಗವಾಗಿ 'ರಾಷ್ಟ್ರೀಯ ಚಿಂತಕರ ವೇದಿಕೆ' ಶುಕ್ರವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ರಾಜ್ಯದ ಸಚಿವ ಗೋವಿಂದ ಕಾರಜೋಳ, ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್ ಅನಿಲ್ ಕುಮಾರ್ ಮತ್ತು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು, ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿಗೆ ಒತ್ತಾಯಿಸಿದ ಮನವಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು -ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿಯ (ಎಸ್ಸಿ) ಆಂತರಿಕ ಮೀಸಲು ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವುದಕ್ಕಾಗಿ ಮುಖ್ಯಮಂತ್ರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರು, ಪಕ್ಷದ ವರಿಷ್ಠರು ಹಾಗೂ ಕಾನೂನು ತಜ್ಞರ ಜೊತೆ ಗಂಭೀರ ಚರ್ಚೆ ನಡೆಸುತ್ತಿದ್ದೇನೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.

ವಿಶ್ವ ಮಾದಿಗ ದಿನದ ಅಂಗವಾಗಿ ಶುಕ್ರವಾರ ಇಲ್ಲಿ ಆಯೋಜಿಸಲಾಗಿದ್ದ ಸಮುದಾಯದ ಚಿಂತಕರ ಮತ್ತು ಬುದ್ಧಿಜೀವಿಗಳ ನಾಲ್ಕನೇ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಳಮೀಸಲು ಕುರಿತಂತೆ ನ್ಯಾಯಮೂರ್ತಿ ಪಿ.ರಾಮಚಂದ್ರ ರಾಜು ವರದಿ, ಮಹಾರಾಷ್ಟ್ರದಲ್ಲಿನ ಲಹೂಜಿ ಸಾಳ್ವೆ ಆಯೋಗದ ವರದಿಗಳನ್ನು ಇದೇ ವೇಳೆ ಪ್ರಸ್ತಾಪಿಸಿದರು.

‘ರಾಜ್ಯದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ 20 ವರ್ಷಗಳಿಂದ ಏನಾಗುತ್ತಿದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ನಾನಿಲ್ಲಿ ನಿಮ್ಮ ಮುಂದೆ ಮಂತ್ರಿಯಾಗಿ ಬಂದು ನಿಂತಿಲ್ಲ. ಬದಲಿಗೆ ಮಾದಿಗ, ಚಮ್ಮಾರರ ಮಗನಾಗಿ ಬಂದಿದ್ದೇನೆ. ಸಮುದಾಯದ ಏಳ್ಗೆಗೆ ಕಟಿಬದ್ಧವಾಗಿ ಕೆಲಸ ಮಾಡುತ್ತೇನೆ’ ಎಂದರು.

ADVERTISEMENT

‘ಇವತ್ತಿಗೂ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮತ್ತು ಐಐಟಿಯಂತಹ ಸಂಸ್ಥೆಗಳಲ್ಲಿ ತುಳಿತಕ್ಕೊಳಗಾದ ಸಮುದಾಯದ ಪಾಲುದಾರಿಕೆ ಬೆರಳೆಣಿಕೆಯಷ್ಟಿದೆ. 70 ದಶಕಗಳಿಗೂ ಮೀರಿದ ಈ ಹಿಂದಿನ ಸರ್ಕಾರಗಳಲ್ಲಿ ದಮನಿತರಿಗಾಗಿ ಯಾವೆಲ್ಲಾ ಯೋಜನೆಗಳು ಎಷ್ಟು ಅನುಷ್ಠಾನಗೊಂಡವು ಎಂಬುದು ಗೊತ್ತಾಗಲೇ ಇಲ್ಲ. ಸೌಲಭ್ಯಗಳು ಶೇ 5 ರಷ್ಟು ಜನರಿಗೆ ಮಾತ್ರವೇ ತಲುಪುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮನವಿ: ಇದೇ ವೇಳೆ, ‘ಇಂಟಲೆಕ್ಚುಯಲ್‌ ಫೋರಂ ಫಾರ್ ಮಾದಿಗ’ ಸಮಿತಿ ವತಿಯಿಂದ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ
ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.