ADVERTISEMENT

ಮಡಿವಾಳ ಸಂಘದ ಮುಂದೆ ಪ್ರತಿಭಟನೆ

ಹಣ ದುರ್ಬಳಕೆ ಆರೋಪ: ಕಚೇರಿಗೆ ಮುತ್ತಿಗೆ ಹಾಕಿದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:13 IST
Last Updated 1 ಅಕ್ಟೋಬರ್ 2019, 19:13 IST
ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು
ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಸಂಘದ ಅಧ್ಯಕ್ಷ ಸಿ. ನಂಜಪ್ಪ ಸರ್ವಾಧಿಕಾರದಿಂದ ವರ್ತಿಸುತ್ತಿದ್ದಾರೆ ಮತ್ತು ಹಣ ದುರ್ಬಳಕೆ ಮಾಡಿದ್ದಾರೆ’ ಎಂದು ಆರೋಪಿಸಿ ರಾಜ್ಯ ಮಡಿವಾಳ ಸಂಘದ ಸದಸ್ಯರು ಶೇಷಾದ್ರಿಪುರದಲ್ಲಿರುವ ಸಂಘದ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಂಘದ ಸದಸ್ಯರು ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ, ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು. ‘ಸಂಘದ ಬೈಲಾವನ್ನು ಕಾನೂನುಬಾಹಿರವಾಗಿ ತಿದ್ದುಪಡಿ ಮಾಡುವ ಜೊತೆಗೆ, ಸಂಘ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದೂ ಆರೋಪಿಸಿದರು.

‘2012ರಿಂದ ಇಲ್ಲಿಯವರೆಗೂ ಸಂಘದ ಸರ್ವ ಸದಸ್ಯರ ಸಭೆ ನಡೆಸಿಲ್ಲ. ಆದರೆ, ಸಭೆ ನಡೆದಿದೆ ಮತ್ತು ಬೈಲಾ ತಿದ್ದುಪಡಿ ಮಾಡಿರುವ ಬಗ್ಗೆ ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ. ಮಡಿವಾಳರ ಇತರ ಸಂಘಗಳೂ ರಾಜ್ಯ ಸಂಘದ ಅಡಿಯಲ್ಲೇ ಕಾರ್ಯ ನಿರ್ವಹಿಸಬೇಕೆಂದು ಬೆದರಿಕೆ ಹಾಕಲಾಗುತ್ತಿದೆ. ಅಧ್ಯಕ್ಷರ ಈ ರೀತಿಯ ಧೋರಣೆಯಿಂದ ಜನಾಂಗಕ್ಕೆ ಅನ್ಯಾಯವಾಗುತ್ತಿದೆ’ ಎಂದೂ ದೂರಿದರು.

ADVERTISEMENT

‘ಸಂಘದ ಠೇವಣಿಯಲ್ಲಿರುವ ಹಣದ ಲೆಕ್ಕಪತ್ರ ಬಹಿರಂಗಪಡಿಸಬೇಕು. ಸಂಘದ ಕಟ್ಟಡದ ಬಾಡಿಗೆದಾರರಿಂದ ಬಂದ ಮುಂಗಡ ಹಣ ಮತ್ತು ಬರುವ ಮಾಸಿಕ ಬಾಡಿಗೆ ಎಷ್ಟು, ಸಂಘದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಂದ ಬರುವ ಹಣವೆಷ್ಟು, ದೆಹಲಿ ಚಲೋ ಕಾರ್ಯಕ್ರಮಕ್ಕೆ ಸಂಗ್ರಹಿಸಿದ ಹಣ ಮತ್ತು ಖರ್ಚಿನ ವಿವರ, ಚಿತ್ರದುರ್ಗ ಸ್ವಾಮೀಜಿಗಳ ಪಟ್ಟಾಭಿಷೇಕಕ್ಕೆ ಸಂಗ್ರಹಿಸಿದ ಹಣ ಮತ್ತು ಖರ್ಚಿನ ವಿವರ ಬಹಿರಂಗಪಡಿಸಬೇಕು’ ಎಂದೂ ಪ್ರತಿಭಟನೆಕಾರರು ಆಗ್ರಹಿಸಿದರು.

ಸಂಘದ ಕ್ಷೇಮಾಭಿವೃದ್ಧಿ ಘಟಕದ ಅಧ್ಯಕ್ಷ ಪಾಪಣ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕಾರಿ ಸದಸ್ಯ ಪ್ರಕಾಶ್ ರಂಗಸ್ವಾಮಿ, ದೀಪಕ್ ಪುಟ್ಟರಂಗಯ್ಯ, ಸಿದ್ದಗಂಗಪ್ಪ ಪ್ರಕಾಶ್, ಮಲ್ಲೇಶ್, ಎಸ್.ಪಿ. ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.