ADVERTISEMENT

ಬೆಂಗಳೂರು: ಬಾಲಕರಿಂದ ಬೈಕ್ ಕಳವು ಮಾಡಿಸುತ್ತಿದ್ದ ಕಾನ್‌ಸ್ಟೆಬಲ್, ನಾಲ್ವರ ಬಂಧನ

53 ದ್ವಿಚಕ್ರ ವಾಹನಗಳ ಜಪ್ತಿ * ಜಪ್ತಿಯಾದ ವಾಹನಗಳ ಮೌಲ್ಯ ₹ 77 ಲಕ್ಷ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 2:00 IST
Last Updated 25 ಡಿಸೆಂಬರ್ 2021, 2:00 IST
ಆರೋಪಿಗಳಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು
ಆರೋಪಿಗಳಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು   

ಬೆಂಗಳೂರು: ಪೊಲೀಸರು ಕಳ್ಳರನ್ನು ಹಿಡಿದು ಶಿಕ್ಷೆಗೊಳಪಡಿಸುವುದು ಸಾಮಾನ್ಯ. ಆದರೆ ನಗರದ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾನ್‌ಸ್ಟೆಬಲ್‌ವೊಬ್ಬ, ಹಣದ ಆಸೆಗೆ ಬೈಕ್‌ ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿದ್ದಾನೆ!

ವಿದ್ಯಾರಣ್ಯಪುರ ಠಾಣೆಯ ಸಿಬ್ಬಂದಿ ಹೊನ್ನಪ್ಪ ದುರದಪ್ಪ ಮಾಳಗಿ ಯಾನೆ ರವಿ (26) ಬಂಧಿತ ಕಾನ್‌ಸ್ಟೆಬಲ್‌. ಈತನ ಸಹಚರ ರಾಜಸ್ಥಾನ ಮೂಲದ ರಮೇಶ್‌ (25) ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಇಬ್ಬರು ಬಾಲಕರನ್ನು ಮಾಗಡಿ ರಸ್ತೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 53 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದರ ಒಟ್ಟು ಮೌಲ್ಯ ₹77 ಲಕ್ಷ ಎಂದು ಅಂದಾಜಿಸಲಾಗಿದೆ.

‘ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ನಿವಾಸಿಯಾಗಿರುವ ಹೊನ್ನಪ್ಪ, ಮೂವರು ಹುಡುಗರನ್ನು ಬಳಸಿಕೊಂಡು ನಗರದ ವಿವಿಧೆಡೆ ಬೈಕ್‌ಗಳನ್ನು ಕಳವು ಮಾಡಿಸುತ್ತಿದ್ದ. ಬಳಿಕ ಅವುಗಳ ನಂಬರ್‌ ಪ್ಲೇಟ್‌ ಬದಲಿಸಿ, ನಕಲಿ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮಾಡಿಸಿ ಬೇರೆ ಜಿಲ್ಲೆಗಳಲ್ಲಿ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಎಂ.ಪಾಟೀಲ ಹೇಳಿದರು.

ADVERTISEMENT

‘ಆರೋಪಿಗಳಿಂದ ನಾಲ್ಕು ರಾಯಲ್‌ ಎನ್‌ಫೀಲ್ಡ್‌, ಒಂದು ಯಮಹಾ ಆರ್‌–15, 10 ಪಲ್ಸರ್‌, ನಾಲ್ಕು ಡ್ಯೂಕ್‌, ಒಂದು ಟಿವಿಎಸ್‌ ಅಪಾಚೆ, 15 ಹೊಂಡಾ ಡಿಯೊ, ಮೂರು ಹೊಂಡಾ ಆ್ಯಕ್ಟೀವಾ, ನಾಲ್ಕು ಯಮಹಾ ಆರ್‌ಎಕ್ಸ್‌ ಹಾಗೂ ಇತರ ಕಂಪನಿಗಳ 10 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನ ನಂದಿನಿ ಲೇಔಟ್‌, ಯಶವಂತಪುರ, ಎಚ್‌ಎಂಟಿ ಲೇಔಟ್‌, ಜಾಲಹಳ್ಳಿ ಕ್ರಾಸ್‌, ಗಂಗಮ್ಮ ಸರ್ಕಲ್‌, ಹೆಬ್ಬಾಳ, ಜ್ಞಾನಭಾರತಿ, ಪೀಣ್ಯ, ರಾಜಗೋಪಾಲನಗರ, ವಿಜಯನಗರ ಹಾಗೂ ನಗರದ ಇತರ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿದ್ದ ಆರೋಪಿಗಳು ಅವುಗಳನ್ನು ಬೆಂಗಳೂರು, ದಾವಣಗೆರೆ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ಮೊದಲಾದ ಜಿಲ್ಲೆಗಳಲ್ಲಿ ಮಾರಿದ್ದರು’ ಎಂದು ವಿವರಿಸಿದರು.

‘ಒಎಲ್‌ಎಕ್ಸ್‌ನಲ್ಲಿ ಬೇಡಿಕೆ ಇದ್ದ ಬೈಕ್‌ ಕಳವು’
‘ಒಎಲ್‌ಎಕ್ಸ್‌ನಲ್ಲಿ ಯಾವ ವಾಹನಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ನೋಡಿಕೊಂಡು ಹೊನ್ನಪ್ಪ, ಅದೇ ಕಂಪನಿಯ ಮತ್ತು ಅದೇ ಬಣ್ಣದ ವಾಹನ ಕದಿಯಲು ಹುಡುಗರಿಗೆ ಸೂಚಿಸುತ್ತಿದ್ದ. ಅವರು ಕದ್ದ ವಾಹನದ ನಂಬರ್‌ ಪ್ಲೇಟ್‌ ಬದಲಿಸುತ್ತಿದ್ದ ಆತ, ನಕಲಿ ಆರ್‌ಸಿ ಕಾರ್ಡ್‌ ಕೂಡ ತಯಾರಿಸುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಗ್ರಾಹಕರು ಮೂಲ ದಾಖಲೆಗಳನ್ನು ಕೇಳಿದಾಗ ಸಾಲದ ಮೇಲೆ ವಾಹನ ಖರೀದಿಸಿರುವುದರಿಂದ ದಾಖಲೆಗಳು ಬ್ಯಾಂಕ್‌ನಲ್ಲಿವೆ. ನೀವು ಮೊದಲು ಹಣ ಪಾವತಿಸಿ, ಮುಂದಿನ ವಾರವೇ ದಾಖಲೆಗಳು ನಿಮ್ಮ ಕೈಸೇರುತ್ತವೆ ಎಂದು ನಂಬಿಸುತ್ತಿದ್ದ’ ಎಂದು ತಿಳಿಸಿದರು.

‘ಆರೋಪಿ 2016ರ ತಂಡದ ಸಿಬ್ಬಂದಿ’
‘ಹೊನ್ನಪ್ಪ, 2016ರ ತಂಡದ ಸಿವಿಲ್‌ ಪೊಲೀಸ್‌ ಕಾನ್‌ಸ್ಟೆಬಲ್‌. ಐಪಿಎಸ್‌ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

‘ಬಾಲಕರುಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದರೆ, ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಕರೆ ಮಾಡುತ್ತಿದ್ದ ಕಾನ್‌ಸ್ಟೆಬಲ್‌ ‘ನಾನು ಕೂಡ ಪೊಲೀಸ್‌. ಹುಡುಗರು ನನ್ನ ಕಡೆಯವರೇ. ಅವರನ್ನು ಬಿಟ್ಟು ಕಳಿಸಿ’ ಎಂದು ಸೂಚಿಸುತ್ತಿದ್ದ. ವಾಹನ ಮಾರಾಟದಿಂದ ಸಿಕ್ಕ ಹಣದಲ್ಲಿ ₹5 ಸಾವಿರದಿಂದ ₹6 ಸಾವಿರವನ್ನು ಬಾಲಕರಿಗೆ ನೀಡುತ್ತಿದ್ದ ಎಂಬುದೂ ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಕರಣದ ತನಿಖೆ ವೇಳೆ ಜಾಲ ಪತ್ತೆ
‘ವ್ಯಕ್ತಿಯೊಬ್ಬರು ಈ ವರ್ಷದ ಅ. 28ರ ಮಧ್ಯಾಹ್ನ ತಮ್ಮ ಮನೆಯ ಮುಂದೆ ಪಲ್ಸರ್‌ ಬೈಕ್‌ ನಿಲ್ಲಿಸಿದ್ದರು. ಮರು ದಿನ ಮಧ್ಯಾಹ್ನ ಬಂದು ನೋಡಿದಾಗ ಬೈಕ್‌ ನಾಪತ್ತೆಯಾಗಿತ್ತು. ಅವರು ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಬ್ಬಂದಿ ತನಿಖೆ ಕೈಗೊಂಡಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇದೇ 21ರಂದು ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಬಾಲಕರನ್ನು ತಡೆದು ವಿಚಾರಿಸಿದಾಗ ಅವರು ಹೊನ್ನಪ್ಪ ಮತ್ತು ರಮೇಶ್‌ ಹೆಸರು ಬಾಯಿ ಬಿಟ್ಟಿದ್ದರು. ಈ ಮಾಹಿತಿ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.