ADVERTISEMENT

‘ಫೇಸ್‌ಬುಕ್‌’ ಮದುವೆ ಮುರಿದ ‘ವಾಟ್ಸ್‌ ಆ್ಯಪ್‌’

ಛತ್ತೀಸಗಡದ ಯುವತಿ–ಬೆಂಗಳೂರಿನ ಯುವಕನ ನಡುವೆ ನೆರವೇರಿದ್ದ ವಿವಾಹ

ಸಂತೋಷ ಜಿಗಳಿಕೊಪ್ಪ
Published 11 ಫೆಬ್ರುವರಿ 2019, 19:59 IST
Last Updated 11 ಫೆಬ್ರುವರಿ 2019, 19:59 IST
ಫೇಸ್‌ಬುಕ್‌ ಮದುವೆ
ಫೇಸ್‌ಬುಕ್‌ ಮದುವೆ   

ಬೆಂಗಳೂರು: ಆ ಯುವತಿಯದ್ದು ಛತ್ತೀಸಗಡದ ರಾಯಪುರ. ಯುವಕನದ್ದು ಬೆಂಗಳೂರು. ‘ಫೇಸ್‌ಬುಕ್‌’ ಮೂಲಕ ಪರಿಚಯವಾದ ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆದರೀಗ ಅವರಿಬ್ಬರನ್ನು ‘ವಾಟ್ಸ್‌ ಆ್ಯಪ್‌’ ಸಂದೇಶಗಳು ದೂರ ದೂರ ಮಾಡಿದ್ದು, ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಛತ್ತೀಸಗಡದ ರಾಯಪುರ ಜಿಲ್ಲಾ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪತ್ನಿ ದಾಖಲಿಸಿದ್ದ ದೂರನ್ನು ಬೆಂಗಳೂರು ಮಹದೇವಪುರ ಠಾಣೆಗೆ ವರ್ಗಾಯಿಸಲಾಗಿದೆ. ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು, ದಂಪತಿಯ ನಡುವಿನ ಜಗಳ ಕಂಡು ತಬ್ಬಿಬ್ಬಾಗಿದ್ದಾರೆ.

‘ದಂಪತಿ ವಿಪರೀತವಾಗಿ ಆ್ಯಪ್‌ಗಳನ್ನು ಬಳಸುತ್ತಾರೆ. ಅವರ ಸಂಸಾರದಲ್ಲಿ ಸುಖವೇ ಇಲ್ಲದಂತಾಗಿದೆ. ಪತ್ನಿಯನ್ನು ಕಂಡರೆ ಪತಿ ಹಾಗೂ ಅವರ ಮನೆಯವರಿಗೆ ಆಗಿ ಬರುತ್ತಿಲ್ಲ. ಅದರಿಂದಲೇ ಪತ್ನಿ, ಮನೆ ಬಿಟ್ಟು ಛತ್ತೀಸಗಡದ ತವರು ಮನೆಗೆ ಹೋಗಿದ್ದಾರೆ. ಸ್ಥಳೀಯ ಠಾಣೆಯಲ್ಲಿ ದೂರು ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಪುಣೆಯಲ್ಲಿ ಮದುವೆ: ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಯುವಕ, ಫೇಸ್‌ಬುಕ್‌ನಲ್ಲಿ 23 ವರ್ಷದ ಯುವತಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಅದನ್ನು ಸ್ವೀಕರಿಸಿದ್ದ ಯುವತಿ ಚಾಟಿಂಗ್ ಮಾಡಲಾರಂಭಿಸಿದ್ದರು.

ಕ್ರಮೇಣ ಅವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿ ಹುಟ್ಟಿಕೊಂಡಿತ್ತು. ‘ನಿನ್ನನ್ನು ಮದುವೆ ಆಗುತ್ತೇನೆ’ ಎಂದು ಯುವಕ ಪ್ರಸ್ತಾಪಿಸಿದ್ದ. ಅದಕ್ಕೆ ಒಪ್ಪಿದ್ದ ಯುವತಿ, ಮದುವೆಗೆ ತಮ್ಮ ಪೋಷಕರನ್ನು ಒಪ್ಪಿಸಿದ್ದರು. ಆದರೆ, ಯುವಕನ ಮನೆಯಲ್ಲಿ ಮದುವೆಗೆ ವಿರೋಧವಿತ್ತು. ಅದರ ನಡುವೆಯೇ 2016ರ ಜ. 22ರಂದು ಪುಣೆಯ ನೋಂದಣಾಧಿಕಾರಿ ಕಚೇರಿಯಲ್ಲಿ ಅವರಿಬ್ಬರು ಮದುವೆ ಆಗಿದ್ದರು.

‘ಮದುವೆ ಆಗಿದ್ದಕ್ಕೆ ನಮ್ಮ ಮನೆಯವರು ಕೋಪಗೊಂಡಿದ್ದಾರೆ. ಸ್ವಲ್ಪ ದಿನ ನೀನು ತವರು ಮನೆಯಲ್ಲೇ ಇರು. ನಮ್ಮ ಮನೆಯವರು ಸರಿಯಾದ ಮೇಲೆ ನಾನೇ ಬಂದು ಕರೆದುಕೊಂಡು ಹೋಗುತ್ತೇನೆ’ ಎಂದು ಪತಿ ಹೇಳಿದ್ದ. ಅದನ್ನು ನಂಬಿದ್ದ ಯುವತಿ, ತವರು ಮನೆಯಲ್ಲಿದ್ದರು. ಕೆಲವು ದಿನ ತವರು ಮನೆಗೆ ಬಂದು ಹೋಗುತ್ತಿದ್ದ ಯುವಕ, ಕ್ರಮೇಣ ಹೋಗುವುದನ್ನೇ ನಿಲ್ಲಿಸಿದ್ದ.

ಅದರಿಂದ ಬೇಸರಗೊಂಡಿದ್ದ ಯುವತಿ, ನ. 25ರಂದು ಬೆಂಗಳೂರಿಗೆ ಬಂದಿದ್ದರು. ಬಿ.ನಾರಾಯಣಪುರದಲ್ಲಿದ್ದ ಪತಿಯ ಮನೆಯಲ್ಲಿ ವಾಸವಿದ್ದರು. ಪತಿ, ಅಲ್ಲಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಪತ್ನಿ, ಮನೆಯಲ್ಲಿರುತ್ತಿದ್ದರು.

‘ವಾಟ್ಸ್‌ಆ್ಯಪ್‌’ ಸಂದೇಶದಿಂದ ಶೀಲದ ಶಂಕೆ: ಪತ್ನಿ ಮೇಲೆ ಕ್ರಮೇಣ ಜಗಳ ತೆಗೆಯಲಾರಂಭಿಸಿದ್ದ ಪತಿ, ಹಲ್ಲೆ ಸಹ ಮಾಡಲಾರಂಭಿಸಿದ್ದ. ಆತನ ತಾಯಿ ಸಹ ಅದಕ್ಕೆ ಸಹಕಾರ ನೀಡುತ್ತಿದ್ದಳು.

ಪತ್ನಿಯ ಮೊಬೈಲ್‌ನ ವಾಟ್ಸ್‌ಆ್ಯಪ್‌ಗೆ ಪೋಷಕರು, ಸಂಬಂಧಿಕರು ಹಾಗೂ ಪರಿಚಯಸ್ಥರೆಲ್ಲ ಸಂದೇಶ ಕಳುಹಿಸುತ್ತಿದ್ದರು. ಅವುಗಳನ್ನೇ ನೆಪವಾಗಿಟ್ಟುಕೊಂಡಿದ್ದ ಪತಿ, ‘ಯಾವುದೋ ಹುಡುಗನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಿಯಾ. ಆತನ ಜೊತೆ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್‌ ಮಾಡುತ್ತಿದ್ದಿಯಾ. ನೀನು ನಡತೆಗೆಟ್ಟವಳು’ ಎಂದು ಹೇಳಿ ಶೀಲದ ಬಗ್ಗೆ ಶಂಕಿಸಿ ಹಿಂಸಿಸುತ್ತಿದ್ದ. ವಿಚ್ಛೇದನ ನೀಡುವಂತೆ ಪೀಡಿಸಲಾರಂಭಿಸಿದ್ದ.

ಪತಿ ಹಾಗೂ ಅತ್ತೆಯ ಕಿರುಕುಳ ಹೆಚ್ಚಾಗಿದ್ದರಿಂದಾಗಿ ಯುವತಿ, ಕಳೆದ ತಿಂಗಳು ತವರು ಮನೆಗೆ ಹೋಗಿದ್ದರು. ಅಲ್ಲಿಗೂ ಕರೆ ಮಾಡುತ್ತಿದ್ದ ಆರೋಪಿ, ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ಕೆಟ್ಟ ಕೆಟ್ಟ ಶಬ್ದಗಳನ್ನು ಬಳಸಿ ವಾಟ್ಸ್‌ಆ್ಯಪ್‌ಗೂ ಸಂದೇಶ ಕಳುಹಿಸುತ್ತಿದ್ದ. ಆತನ ಕಾಟ ವಿಪರೀತವಾಗುತ್ತಿದ್ದಂತೆ ಯುವತಿ, ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಾವು ಅನುಭವಿಸಿದ ಕಿರುಕುಳವನ್ನು ದೂರಿನಲ್ಲಿ ವಿಸ್ತೃತವಾಗಿ ಬರೆದಿದ್ದಾರೆ.

ಬೆಂಗಳೂರಿಗೆ ಬರುವಂತೆ ಯುವತಿಗೆ ಸಂದೇಶ

‘ಯುವತಿ ನೀಡಿದ್ದ ದೂರಿನನ್ವಯ ಪ್ರಾಥಮಿಕ ತನಿಖೆ ನಡೆಸಿದ್ದರಾಯಪುರ ಜಿಲ್ಲಾ ಮಹಿಳಾ ಠಾಣೆ ಪೊಲೀಸರು, ಅದರ ವರದಿ ಸಮೇತ ಪ್ರಕರಣವನ್ನು ನಮಗೆ ವರ್ಗಾಯಿಸಿದ್ದಾರೆ. ಬೆಂಗಳೂರಿಗೆ ಬಂದು ಪ್ರಕರಣದ ಬಗ್ಗೆ ಮತ್ತಷ್ಟು ವಿವರಣೆ ನೀಡುವಂತೆ ಯುವತಿಗೆ ಸಂದೇಶ ಕಳುಹಿಸಿದ್ದೇವೆ’ ಎಂದು ಮಹದೇವಪುರ ಪೊಲೀಸರು ಹೇಳಿದರು.

‘ವರದಕ್ಷಿಣಿ ಕಿರುಕುಳ, ಜೀವ ಬೆದರಿಕೆ ಆರೋಪದಡಿ ಪತಿ ಹಾಗೂ ಆತನ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವತಿ ಬಂದ ನಂತರ ಸಮಗ್ರವಾಗಿ ಹೇಳಿಕೆ ಪಡೆಯಲಿದ್ದೇವೆ. ನಂತರವೇ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.