ADVERTISEMENT

ಮಹದೇವಪುರ ಕ್ಷೇತ್ರದಲ್ಲಿ ಮತ ಕಳ್ಳತನವಾಗಿಲ್ಲ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 18:37 IST
Last Updated 30 ಜುಲೈ 2025, 18:37 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ಕೆ.ಆರ್.ಪುರ: ‘ಮಹದೇವಪುರ ಕ್ಷೇತ್ರದಲ್ಲಿ ಐಟಿ–ಬಿಟಿ ಕಂಪನಿಗಳು ಹೆಚ್ಚಾಗಿರುವುದರಿಂದ ವಲಸಿಗರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ. ಹೀಗಾಗಿ ಮತದಾರರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಈ ಕ್ಷೇತ್ರದಲ್ಲಿ ಯಾವುದೇ ಮತಕಳ್ಳತನವಾಗಿಲ್ಲ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಮತ ಕಳ್ಳತನವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪವನ್ನು ನಿರಾಕರಿಸಿದ ಲಿಂಬಾವಳಿ, ‘ಸಂಸದ ಪಿ.ಸಿ.ಮೋಹನ್ ಅವರಿಗೆ ಮಹದೇವಪುರ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ಸಿಕ್ಕಿದೆ’ ಎಂದೂ ಹೇಳಿದರು.

ಮಹದೇವಪುರ ಕ್ಷೇತ್ರದ ಕಿತ್ತನಗನೂರು ಸಮೀಪದ ಹ್ಯಾಪಿ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಮಹದೇವಪುರ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆಯು ಸಹ ಹೆಚ್ಚಳವಾಗಿದೆ. ದೇಶ, ಹೊರರಾಜ್ಯಗಳಿಂದ ವಲಸಿಗರ ಉದ್ಯೋಗ, ಶಿಕ್ಷಣ, ಉದ್ಯಮ ಸ್ಥಾಪನೆ ಇನ್ನಿತರ ಕೆಲಸಗಳಿಗೆ ಬಂದು ಇಲ್ಲೇ ನೆಲಸಿ, ನಮ್ಮ ಕ್ಷೇತ್ರದಲ್ಲಿ ಮತದಾರರು ಆಗಿದ್ದಾರೆ. ನಾನು ಮೊದಲ ಬಾರಿಗೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವ ಸಂದರ್ಭದಲ್ಲಿ ಎರಡೂವರೆ ಲಕ್ಷ ಮತದಾರರು ಇದ್ದರು. ಈಗ ಆರೂವರೆ ಲಕ್ಷ ಮತದಾರರು ಇದ್ದಾರೆ. ವರ್ಷದಿಂದ ವರ್ಷಕ್ಕೆ ಮತದಾರರ ಸಂಖ್ಯೆ ಹೆಚ್ಚಳವಾಗಿದೆ’ ಎಂದು ವಿವರಿಸಿದರು.

‘ಹುರುಳಿಲ್ಲದ ಆರೋಪ ಮಾಡುವುದನ್ನು ಬಿಟ್ಟು ಮೊದಲು ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶದ ವಲಸಿಗರನ್ನು ಗಡಿಪಾರು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಎಸ್.ಪಿಳ್ಳಪ್ಪ, ಮುಖಂಡರಾದ ಕೆ.ವಿ.ನಾಗರಾಜ್, ರಾಂಪುರ ಗಣೇಶ್, ಕೃಷ್ಣಮ್ಮ, ಮಾದೇಶ್, ವಿ.ಪಿ.ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.