ADVERTISEMENT

ಮಹಾಲಕ್ಷ್ಮಿ ಬಡಾವಣೆ : ಗೋಪಾಲಯ್ಯ ಮಣಿಸಲು ಕಾಂಗ್ರೆಸ್‌, ಜೆಡಿಎಸ್‌ ಏದುಸಿರು

ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರ– ಸಾಕ್ಷಾತ್‌ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 6 ಮೇ 2023, 20:04 IST
Last Updated 6 ಮೇ 2023, 20:04 IST
ಕೆ. ಗೋಪಾಲಯ್ಯ
ಕೆ. ಗೋಪಾಲಯ್ಯ   

ವಿ.ಎಸ್‌. ಸುಬ್ರಹ್ಮಣ್ಯ

ಬೆಂಗಳೂರು: ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಮಧ್ಯದ ಜಿದ್ದಾಜಿದ್ದಿಯ ಕಣವಾಗಿತ್ತು. ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಸಾಧಿಸಿರುವ ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಈ ಬಾರಿ ಪ್ರಬಲ ಪೈಪೋಟಿ ನೀಡುವುದಕ್ಕೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಏದುಸಿರು ಬಿಡುತ್ತಿವೆ.

ಅಭಿವೃದ್ಧಿ ಹೊಂದಿದ ಪ್ರದೇಶಗಳು, ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಪ್ರದೇಶಗಳು ಮತ್ತು ಕೊಳೆಗೇರಿಗಳನ್ನು ಒಳಗೊಂಡಿರುವ ಪ್ರದೇಶದಲ್ಲಿ ಮತದಾರರ ಸಂಖ್ಯೆಯಲ್ಲಿ ಒಕ್ಕಲಿಗರೇ ನಿರ್ಣಾಯಕ. ಕಾಂಗ್ರೆಸ್‌ ಹಿಡಿತದಿಂದ ಜೆಡಿಎಸ್‌ ತೆಕ್ಕೆಗೆ ಹೊರಳಿದ್ದ ಕ್ಷೇತ್ರದಲ್ಲಿ ಗೋಪಾಲಯ್ಯ ಅವರ ಪಕ್ಷಾಂತರದಿಂದ ಬಿಜೆಪಿ ಬಲವಾದ ಹಿಡಿತ ಸಾಧಿಸಿದೆ. ಪಕ್ಷಕ್ಕಿಂತಲೂ ಗೋಪಾಲಯ್ಯ ಅವರ ವೈಯಕ್ತಿಕ ಪ್ರಭಾವವೇ ಕ್ಷೇತ್ರದ ಉದ್ದಗಲಕ್ಕೂ ಸದ್ದು ಮಾಡುತ್ತಿದೆ.

ADVERTISEMENT

2019ರಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಗೋಪಾಲಯ್ಯ, ಆಗ ನಡೆದ ಉಪ ಚುನಾವಣೆಯಲ್ಲಿ ‘ಕಮಲ’ದ ಗುರುತಿಗ ವಿಜಯಮಾಲೆ ತೊಡಿಸುವಲ್ಲಿ ಯಶಸ್ವಿಯಾಗಿದ್ದರು. ನಂತರದ ಮೂರು ವರ್ಷಗಳಲ್ಲಿ ಹಿಂದೆ ತಮಗೆ ಪ್ರತಿಸ್ಪರ್ಧಿಗಳಾಗಿದ್ದವರೂ ಸೇರಿದಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಲವರನ್ನು ಬಿಜೆಪಿಗೆ ಕರೆತಂದಿದ್ದಾರೆ. 2019ರ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಡಾ. ಗಿರೀಶ್‌ ಕೆ. ನಾಶಿ ಅವರೇ ಈಗ ಬಿಜೆಪಿಯಲ್ಲಿದ್ದಾರೆ. ಪಕ್ಷಾಂತರದ ಹೊಡೆತಕ್ಕೆ ಎರಡೂ ಪಕ್ಷಗಳು ಇಲ್ಲಿ ಅಕ್ಷರಶಃ ತತ್ತರಿಸಿಹೋಗಿವೆ.

ಈ ಬಾರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಈ ಕ್ಷೇತ್ರದಿಂದ ಕಣಕ್ಕಿಳಿಯಲು ಹೆಚ್ಚು ಪೈಪೋಟಿಯೇ ಇರಲಿಲ್ಲ. ಕಾಂಗ್ರೆಸ್‌ನಿಂದ ಬಿಬಿಎಂಪಿ ಮಾಜಿ ಸದಸ್ಯ ಎಸ್‌. ಕೇಶವಮೂರ್ತಿ ಅವರನ್ನು ಕಣಕ್ಕಿಳಿಸಿದ್ದರೆ, ಗೋಪಾಲಯ್ಯ ಅವರಿಗೆ ವರಸೆಯಲ್ಲಿ ಅಣ್ಣನಾದ (ದೊಡ್ಡಪ್ಪನ ಮಗ) ಕೆ.ಸಿ. ರಾಜಣ್ಣ ಜೆಡಿಎಸ್‌ ಹುರಿಯಾಳು. ಆಮ್‌ ಆದ್ಮಿ ಪಕ್ಷದ (ಆಪ್‌) ಶಾಂತಲಾ ದಾಮ್ಲೆ ಸ್ಪರ್ಧೆಯಲ್ಲಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯ ಅಮಿತ್‌ ರೆಬೆಲ್ಲೊ, ಬಹುಜನ ಸಮಾಜ ಪಕ್ಷದ ಎನ್‌. ನಾರಾಯಣಸ್ವಾಮಿ ನವಕೋಟಿ ಸೇರಿದಂತೆ ಒಟ್ಟು 12 ಮಂದಿ ಈ ಕ್ಷೇತ್ರದ ಚುನಾವಣಾ ಅಖಾಡದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯದಲ್ಲೇ ತ್ರಿಕೋನ ಸ್ಪರ್ಧೆ ಇದೆ. ದೀರ್ಘ ಕಾಲದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಆಪ್‌ ಅಭ್ಯರ್ಥಿ ಒಂದಷ್ಟು ಮತ ಕಸಿಯಬಹುದಾದ ಸಾಧ್ಯತೆಗಳು ಕಾಣಿಸುತ್ತಿವೆ. ಅಭಿವೃದ್ಧಿ ಸೇರಿದಂತೆ ಇತರ ವಿಚಾರಗಳಿಗಿಂತಲೂ ಇಲ್ಲಿ ವೈಯಕ್ತಿಕ ವರ್ಚಸ್ಸೇ ಫಲಿತಾಂಶ ನಿರ್ಧರಿಸುವಂತಿದೆ.

ಕ್ಷೇತ್ರದ 270 ಮತಗಟ್ಟೆಗಳಲ್ಲೂ ಗೋಪಾಲಯ್ಯ ಹಿಡಿತ ಹೊಂದಿದ್ದಾರೆ. ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಿರುವುದು, ಮಕ್ಕಳ ಶಿಕ್ಷಣಕ್ಕೆ ವೈಯಕ್ತಿಕವಾಗಿ ನೆರವು ನೀಡುತ್ತಿರುವುದು, ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳ ಸುಧಾರಣೆ, ಡಯಾಲಿಸಿಸ್‌ ಕೇಂದ್ರದ ಸ್ಥಾಪನೆ ಹೆಚ್ಚು ಮತ ಗಳಿಕೆಗೆ ನೆರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕೋವಿಡ್‌ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಹಾರದ ಕಿಟ್‌ಗಳನ್ನು ವಿತರಿಸಿ, ಚಿಕಿತ್ಸೆ ಮತ್ತು ಆಮ್ಲಜನಕದ ಪೂರೈಕೆಗೆ ವ್ಯವಸ್ಥೆ ಮಾಡಿರುವುದೂ ಚುನಾವಣೆಯಲ್ಲಿ ಫಲ ನೀಡಬಹುದು ಎಂಬುದು ಅವರ ಲೆಕ್ಕಾಚಾರ.

‘ಗೋಪಾಲಯ್ಯ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎಂಬುದು ಕಾಂಗ್ರೆಸ್‌ನ ಪ್ರಚಾರದ ಪ್ರಮುಖ ಅಸ್ತ್ರ. ಕಾಂಗ್ರೆಸ್‌ ಪಕ್ಷದ ‘ಗ್ಯಾರಂಟಿ’, ಪ್ರಣಾಳಿಕೆ ನೆರವಿಗೆ ಬರಬಹುದು ಎಂಬುದು ಕೇಶವಮೂರ್ತಿ ಅವರ ವಿಶ್ವಾಸ. ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಅವರ ಪ್ರಭಾವವೇ ಒಕ್ಕಲಿಗರ ಮತಗಳು ಪಕ್ಷದಿಂದ ಚದುರದಂತೆ ತಡೆ ಹಿಡಿದು ತಮ್ಮನ್ನು ಗೆಲುವಿನ ದಡ ಮುಟ್ಟಿಸುತ್ತದೆ ಎಂಬುದು ರಾಜಣ್ಣ ಅವರ ನಂಬಿಕೆ.

ದಿನದಿಂದ ದಿನಕ್ಕೆ ಗೋಪಾಲಯ್ಯ ಅವರ ಪ್ರಚಾರದ ಅಬ್ಬರ ಹೆಚ್ಚುತ್ತಿದೆ. ಪಕ್ಷಾಂತರವೂ ನಿಂತಿಲ್ಲ. ಬಿಜೆಪಿಯತ್ತ ಹರಿದುಹೋಗುತ್ತಿರುವ ಜನಬೆಂಬಲವನ್ನು ತಡೆಹಿಡಿದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಗೋಪಾಲಯ್ಯ ಅವರಿಗೆ ಹೇಗೆ ಸ್ಪರ್ಧೆ ಒಡ್ಡಲಿದ್ದಾರೆ ಎಂಬುದೇ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.