ಬೆಂಗಳೂರು: ‘ಸಂವಿಧಾನದಡಿ ಮಾಧ್ಯಮಕ್ಕೆ ಪ್ರತ್ಯೇಕ ವಾಕ್ ಸ್ವಾತಂತ್ರ್ಯ ಅಗತ್ಯವಿದೆ’ ಎಂದು ಪತ್ರಕರ್ತೆ ಮಾಯಾ ಶರ್ಮ ತಿಳಿಸಿದರು.
ಮಹಾರಾಣಿ ಲಕ್ಷ್ಮೀ ಅಮ್ಮಣಿ ಕಾಲೇಜು ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ‘ಸಂವಿಧಾನ ಮತ್ತು ಆಧುನಿಕ ಭಾರತದಲ್ಲಿ ಯುವಕರು’ ಎಂಬ ವಿಷಯದ ಮೇಲೆ ಮಾತನಾಡಿದರು.
‘ಸ್ವತಂತ್ರವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪತ್ರಕರ್ತರಿಗೆ ವಾಕ್ ಸ್ವಾತಂತ್ರ್ಯ ಅಗತ್ಯ. ಹೊಸದಾಗಿ ಮಾಧ್ಯಮ ಕ್ಷೇತ್ರಕ್ಕೆ ಬರುವವರು ಸಂವಿಧಾನ ಮತ್ತು ವ್ಯವಸ್ಥೆಯ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರಬೇಕು’ ಎಂದು ಹೇಳಿದರು.
ವಕೀಲ ಎನ್.ಹರೀಶ್, ‘ರಾಜಕಾರಣಿಗಳು ವಿಧಾನಸಭೆಯಲ್ಲಿ ಮಾತನಾಡದೆ, ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಧ್ವನಿಯಾಗಬೇಕು’ ಎಂದು ತಿಳಿಸಿದರು.
ವಿಧಿ ಸಂಸ್ಥೆಯ ಅಲೋಕ್ ಪ್ರಸನ್ನ, ‘ವಾಕ್ ಸ್ವಾತಂತ್ರ್ಯ, ರಾಷ್ಟ್ರೀಯ ಭದ್ರತಾ ಕಾನೂನು ಸೇರಿ ವಿವಿಧ ಕಾನೂನುಗಳಿಗೆ ಸಂವಿಧಾನದಲ್ಲಿ ಒಂದು ಮಿತಿ ಇರಬೇಕಾಗುತ್ತದೆ. ಸಂವಿಧಾನದ ಮೂಲಭೂತ ಹಕ್ಕುಗಳನ್ನು ಸಂರಕ್ಷಣೆ ಮಾಡುವುದು ಕೇವಲ ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಕಾರ್ಯವಲ್ಲ. ಈ ವಿಷಯದಲ್ಲಿ ಸರ್ಕಾರದ ಜವಾಬ್ದಾರಿಯೂ ಇದೆ’ ಎಂದು ಹೇಳಿದರು
ಕಾಲೇಜಿನ ಪ್ರಾಂಶುಪಾಲೆ ನಾಗಲಕ್ಷ್ಮೀ, ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥೆ ಮಂಜುಳಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.