
ಮಹಾತ್ಮ ಗಾಂಧೀಜಿ
ಗಾಂಧಿ ಕೃತಿ ಶತಮಾನೋತ್ಸವ ಇಂದು
ಬೆಂಗಳೂರು: ಜನಮುಖಿ ಶೋಷಿತರ ಪರವಾದ ವೇದಿಕೆಯು ಇದೇ 30ರಂದು ಬೆಳಿಗ್ಗೆ 10.30ಕ್ಕೆ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಮಹಾತ್ಮ ಗಾಂಧೀಜಿ ಅವರ ‘ನನ್ನ ಸತ್ಯಾನ್ವೇಷಣೆ’ ಕೃತಿಯ ಶತಮಾನೋತ್ಸವ ಹಾಗೂ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ. ನಾರಾಯಣ ಸ್ವಾಮಿ, ‘ಸಾಮಾಜಿಕ ಜಾಲತಾಣದಲ್ಲಿ ಗಾಂಧೀಜಿ ಅವರ ಬಗ್ಗೆ ನಕಾರಾತ್ಮಕ ಅಂಶಗಳನ್ನು ಹರಡಲಾಗುತ್ತಿದೆ. ಅವರ ಬಗ್ಗೆ ಉಂಟು ಮಾಡುತ್ತಿರುವ ವಿರೋಧ ಭಾವನೆ ಹೋಗಲಾಡಿಸಿ, ಯುವಜನರಲ್ಲಿ ಗಾಂಧಿಪ್ರಜ್ಞೆ ಜಾಗೃತಗೊಳಿಸುವುದು ಕಾರ್ಯಕ್ರಮದ ಉದ್ದೇಶ’ ಎಂದು ತಿಳಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಚಿವರಾದ ಎಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್, ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಶಾಸಕ ಜಾನ್ ರಿಚರ್ಡ್ ಲೋಬೋ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ. ರಘುನಂದನ, ಖಜಾಂಚಿ ಪಿ.ಬಿ. ಜಯಕೃಷ್ಣ ಉಪಸ್ಥಿತರಿದ್ದರು.
ಫೆ.1ಕ್ಕೆ ಬ್ಯಾರಿ ಕೂಟ
ಬೆಂಗಳೂರು: ನಗರದಲ್ಲಿರುವ ಬ್ಯಾರಿ ಸಮುದಾಯದವರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಬ್ಯಾರಿಸ್ ಸೆಂಟ್ರಲ್ ಕಮಿಟಿ ಫೆ.1ರಂದು ಬೆಳಿಗ್ಗೆ 10 ಗಂಟೆಗೆ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‌ನಲ್ಲಿ ‘ಬ್ಯಾರಿ ಕೂಟ’ ಹಮ್ಮಿಕೊಂಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಶಬೀರ್ ಬ್ರಿಗೇಡ್, ‘ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಒಟ್ಟು ₹ 10 ಲಕ್ಷ ವಿದ್ಯಾರ್ಥಿವೇತನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ. ಆಂಬುಲೆನ್ಸ್‌ಗೆ ಕೂಡ ಚಾಲನೆ ನೀಡಲಾಗುತ್ತದೆ. ಸಮುದಾಯದ ಮಕ್ಕಳು, ಮಹಿಳೆಯರು ಹಾಗೂ ಯುವಜನರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
‘ಬ್ಯಾರಿ ಕವಿಗೋಷ್ಠಿ, ಬ್ಯಾರಿ ಸಂಸ್ಕೃತಿ ಪ್ರತಿಬಿಂಬಿಸುವ ‘ಒಪ್ಪನೆ ಪಾಟ್’, ಬ್ಯಾರಿ ಕಲೆ ಬಿಂಬಿಸುವ ಎಕ್ಸ್‌ಪೋ, ಕರಾವಳಿಯ ತಿಂಡಿ–ತಿನಿಸುಗಳ ಆಹಾರ ಮೇಳ, ಉದ್ಯಮ ಸಮಾವೇಶ ಸೇರಿದಂತೆ ಸಮುದಾಯದವರಿಗೆ ವಿವಿಧ ಚಟುವಟಿಕೆಗಳು ಇರಲಿವೆ’ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ, ಉಪಾಧ್ಯಕ್ಷ ಗಫೂರ್, ಕೋಶಾಧಿಕಾರಿ ರಿಫಾಯಿ, ಸಂಘಟನಾ ಕಾರ್ಯದರ್ಶಿ ಅಥಾವುಲ್ಲ ಪೂಂಜಾಲಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
‘ಪ್ರತ್ಯೇಕ ಒಳಮೀಸಲಾತಿ ಕಲ್ಪಿಸಿ’
ಬೆಂಗಳೂರು: ‘ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಮಗಾರ–ಚಮ್ಮಾರ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿ ಕಲ್ಪಿಸಿ, ಸರ್ಕಾರಿ ಸೌಲಭ್ಯ ಒದಗಿಸಬೇಕು’ ಎಂದು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಆಗ್ರಹಿಸಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಭೀಮರಾವ ಪವಾರ, ‘ಸಮುದಾಯದವರು 10 ಲಕ್ಷ ಜನರಿದ್ದಾರೆ. ಒಳಮೀಸಲಾತಿ ವೇಳೆ ಸಮುದಾಯವನ್ನು ಪ್ರತ್ಯೇಕವಾಗಿ ಪರಿಗಣಿಸದ ಪರಿಣಾಮ ಅನ್ಯಾಯವಾಗಿದೆ. ಶೇ 6ರ ಒಳಮೀಸಲಾತಿಯಲ್ಲಿ ಚರ್ಮಕಾರರ ಪಾಲು ಎಷ್ಟು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಆದ್ದರಿಂದ ಒಳಮೀಸಲಾತಿಯ ಪಾಲನ್ನು ನಿಗದಿಪಡಿಸಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.
‘ಶಿವಶರಣ ಹರಳಯ್ಯ ಅವರ ಹೆಸರಿನಲ್ಲಿ ಅನ್ಯ ಜಾತಿಯವರು ಸಮುದಾಯದ ಸೌಲಭ್ಯ ಪಡೆಯುತ್ತಿದ್ದಾರೆ. ಅವರ ಹೆಸರಿನಲ್ಲಿ ಮಂಜೂರಾಗುವ ಎಲ್ಲ ಸೌಲಭ್ಯಗಳು ಚಮ್ಮಾರ ಸಮುದಾಯಕ್ಕೆ ತಲುಪುವಂತೆ ಎಚ್ಚರವಹಿಸಬೇಕು’ ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಮೋಹನ ಉಳ್ಳಿಕಾಶಿ, ಉಪಾಧ್ಯಕ್ಷ ಮಹದೇವ ಪೋಳ ಮತ್ತು ಪ್ರಧಾನ ಕಾರ್ಯದರ್ಶಿ ಮನೋಹರ ಮಂದೋಲಿ ಉಪಸ್ಥಿತರಿದ್ದರು.
ಮತದಾರರ ಅಹವಾಲಿಗೆ ‘ಬುಕ್ ಎ ಕಾಲ್’
ಬೆಂಗಳೂರು: ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಂದ ಮತದಾರರ ಪಟ್ಟಿ ಬಗೆಗಿನ ಅಹವಾಲುಗಳಿಗೆ ಉತ್ತರ ಪಡೆಯಲು ‘ಬುಕ್ ಎ ಕಾಲ್’ ಪರಿಚಯಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ಅಂತರ್ಜಾಲದಲ್ಲಿ (eci.in) ವೋಟರ್ ಸರ್ವಿಸ್ ಪೋರ್ಟಲ್‌ನಲ್ಲಿ ‘ಬುಕ್ ಎ ಕಾಲ್ ಟು ಬಿಎಲ್‌ಒ’ ನಲ್ಲಿ ‘ಕಾಲ್ ರಿಕ್ವೆಸ್ಟ್ ಟು ಬಿಎಲ್‌ಒ’ ಮೇಲೆ ಕ್ಲಿಕ್ ಮಾಡಿದರೆ ಮತದಾರರಿಗೆ ‘ರೆಫೆರೆನ್ಸ್ ಐಡಿ’ ಬರುತ್ತದೆ. ಇದರ ಆಧಾರದ ಮೇಲೆ ಮತಗಟ್ಟೆ ಅಧಿಕಾರಿಗಳು ನಮೂದಾಗಿರುವ ತಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಹವಾಲುಗಳನ್ನು ಪರಿಹರಿಸಲಿದ್ದಾರೆ. ಈ ಸೌಲಭ್ಯವನ್ನು ವಿಶೇಷ ಸಮಗ್ರ ಪರಿಷ್ಕರಣೆ-2025 ಚಾಲ್ತಿಯಲ್ಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.