ADVERTISEMENT

ಮಹೇಶ್ ಜೋಶಿಯನ್ನು ಬಂಧಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ: ಹೈಕೋರ್ಟ್‌ಗೆ ವಕೀಲರು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 15:35 IST
Last Updated 9 ಫೆಬ್ರುವರಿ 2026, 15:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: "ಕರ್ನಾಟಕ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಮಹೇಶ್‌ ಜೋಶಿ ಅವರನ್ನು ಬಂಧಿಸಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ" ಎಂದು ಜೋಶಿ ಪರ ವಕೀಲರು ಹೈಕೋರ್ಟ್‌ಗೆ ದೂರಿದರು.

ಕಸಾಪ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ನೇಮಕ ಪ್ರಶ್ನಿಸಿ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಜೋಶಿ ಪರ ಪದಾಂಕಿತ ಹಿರಿಯ ವಕೀಲ ಜಯಕುಮಾರ್‌ ಎ. ಪಾಟೀಲ್‌ “ನ್ಯಾಯಾಲಯದಲ್ಲಿ ಆರ್‌ಎಫ್‌ಎ ಬಾಕಿ ಇದ್ದು, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಕಸಾಪ ಕಚೇರಿಯಲ್ಲಿ ಇರಿಸಲಾಗಿದೆ. ಅದನ್ನು ತೆಗೆದುಕೊಳ್ಳಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿದೆ” ಎಂದರು.

ADVERTISEMENT

ಇದಕ್ಕೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು, “ಅದನ್ನು ಎಲ್ಲಿಡಲಾಗಿದೆ ಎಂಬುದು ಅವರಿಗೇ ಗೊತ್ತು. ಜೋಶಿ ಅವರೇ ಬಂದು ಅದನ್ನು ಪಡೆದುಕೊಳ್ಳಬಹುದು" ಎಂದರು.

ಇದಕ್ಕೆ ಪಾಟೀಲ್‌, "ಜೋಶಿಯವರು ಅಧಿಕಾರದಲ್ಲಿ ಇದ್ದಾಗ ದಾಖಲೆಗಳು ಕಪಾಟಿನಲ್ಲಿ ಇದ್ದವು. ಈಗ ಅವು ಅಲ್ಲಿಲ್ಲ. ಅವೆಲ್ಲವನ್ನೂ ಕಂತೆ ಕಟ್ಟಿ ಇಡಲಾಗಿದೆ. ಒಂದು ವೇಳೆ ಜೋಶಿ ಹೋಗಿ ಅವುಗಳನ್ನು ಮುಟ್ಟಿದರೆ ದಾಖಲೆ ಕಳವು ಆರೋಪ ಹೊರಿಸುವ ಸಾಧ್ಯತೆ ಇದೆ. ಬೇಕಿದ್ದರೆ ಅವರು ಅಲ್ಲಿಗೆ ಹೋಗಿ, ಯಾವ ಪತ್ರ ಎಂದು ಹೇಳುತ್ತಾರೆ. ಅದನ್ನು ತೆಗೆದುಕೊಡಬೇಕು. ಹಿಂದೆ ಒಮ್ಮೆ ಹೋಗಿದ್ದಾಗ. ಅವರನ್ನು ಬಂಧಿಸಲು ಪ್ರಯತ್ನಿಸಲಾಗಿತ್ತು" ಎಂದು ದೂರಿದರು.

ಇದಕ್ಕೆ ನ್ಯಾಯಪೀಠ, “ನೀವು ಅಲ್ಲಿ ಹೋಗದಿದ್ದರೆ ಆ ಪತ್ರಗಳು ಹೇಗೆ ಸಿಗುತ್ತವೆ? ಅವು ಎಲ್ಲಿವೆ ಎಂಬುದು ಸರ್ಕಾರಕ್ಕೇನು ಗೊತ್ತು? ಸರ್ಕಾರದ ಉಸ್ತುವಾರಿಯಡಿ ನೀವೇ ಅಲ್ಲಿಗೆ ಹೋಗಿ ದಾಖಲೆ ಪಡೆಯಬಹುದು. ಶೋಧಿಸಿ ನಿಮಗೆ ಕೊಡಿ ಎಂದು ಸರ್ಕಾರಕ್ಕೆ ನಿರ್ದೇಶಿಸಿಲಾಗದು" ಎಂದು ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.

ಕೋರಿಕೆ: "ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ಸಹಕಾರ ಸಂಘಗಳ ನೋಂದಣಾಧಿಕಾರಿ 2025ರ ಜೂನ್ 26 ಹಾಗೂ 30ರಂದು ತನಿಖಾಧಿಕಾರಿ ನೇಮಕ ಮಾಡಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು" ಎಂದು ಮಹೇಶ್ ಜೋಶಿ ಕೋರಿದ್ದಾರೆ.