ADVERTISEMENT

ಅಧಿಕಾರಕ್ಕಾಗಿ ಕಸಾಪ ಕಚೇರಿ ಬಾಗಿಲು ಬಡಿದ ಜೋಶಿ; ಸಿಬ್ಬಂದಿ ಜತೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 14:15 IST
Last Updated 31 ಜನವರಿ 2026, 14:15 IST
ಕಸಾಪ ಆಡಳಿತಾಧಿಕಾರಿ ಕಚೇರಿ ಮುಂದೆ ಮಹೇಶ ಜೋಶಿ, ಬಿ.ಎಂ.ಪಟೇಲ್ ಪಾಂಡು, ಡಿ.ಆರ್. ವಿಜಯ ಕುಮಾರ್  
ಕಸಾಪ ಆಡಳಿತಾಧಿಕಾರಿ ಕಚೇರಿ ಮುಂದೆ ಮಹೇಶ ಜೋಶಿ, ಬಿ.ಎಂ.ಪಟೇಲ್ ಪಾಂಡು, ಡಿ.ಆರ್. ವಿಜಯ ಕುಮಾರ್     

ಬೆಂಗಳೂರು: ಅಧ್ಯಕ್ಷ ಸ್ಥಾನ ಅಲಂಕರಿಸಲು ವಕೀಲರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಶನಿವಾರ ಭೇಟಿ ನೀಡಿದ್ದ ಮಹೇಶ ಜೋಶಿ, ಕಚೇರಿಯ ಬಾಗಿಲು ತೆರೆಯಲು ಒಪ್ಪದ ಅಲ್ಲಿನ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದರು.

ಸಹಕಾರ ಇಲಾಖೆಯು ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶದಲ್ಲಿ ‘ಅಧಿಕಾರವಧಿ ಮುಂದಿನ ಮೂರು ತಿಂಗಳಿಗೆ ಅಥವಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ನೇಮಕಾತಿ ಜಾರಿಯಲ್ಲಿ ಇರಲಿದೆ’ ಎಂದು ತಿಳಿಸಿತ್ತು. ಆಡಳಿತಾಧಿಕಾರಿ ಅವಧಿ ವಿಸ್ತರಿಸಿರುವ ಬಗ್ಗೆ ಮಾಹಿತಿ ಇರದಿದ್ದ ಜೋಶಿ, ಈ ಹಿಂದೆ ತಮ್ಮ ಕಾರ್ಯಕಾರಿ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಯಾಗಿದ್ದ ಬಿ.ಎಂ.ಪಟೇಲ್ ಪಾಂಡು, ಗೌರವ ಕೋಶಾಧ್ಯಕ್ಷರಾಗಿದ್ದ ಡಿ.ಆರ್. ವಿಜಯ ಕುಮಾರ್ ಜತೆಗೆ ಅಧ್ಯಕ್ಷ ಸ್ಥಾನ ಅಲಂಕರಿಸಲು ಪರಿಷತ್ತಿಗೆ ಭೇಟಿ ನೀಡಿದರು.

ಆಡಳಿತಾಧಿಕಾರಿ ಕಚೇರಿಯ ಬಾಗಿಲು ತೆರೆಯುವಂತೆ ಜೋಶಿ ಪಟ್ಟು ಹಿಡಿದ ಕಾರಣ, ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಆಡಳಿತಾಧಿಕಾರಿ ಅವರ ಅವಧಿ ವಿಸ್ತರಿಸಿ ಹೊರಡಿಸಲಾದ ಆದೇಶದ ಪ್ರತಿಯನ್ನು, ಕಸಾಪ ಸಿಬ್ಬಂದಿ ಪೊಲೀಸರ ಸಮ್ಮುಖದಲ್ಲಿ ನೀಡುತ್ತಿದ್ದಂತೆ ವಾಪಸ್ ತೆರಳಿದರು.

ADVERTISEMENT

ಮಹೇಶ ಜೋಶಿ ಅವರ ಕಾರ್ಯವಿಧಾನದ ಬಗ್ಗೆ ಆರೋಪಗಳು ಎದುರಾಗಿದ್ದರಿಂದಾಗಿ, ಸಹಕಾರ ಇಲಾಖೆಯು ಈ ಹಿಂದೆ ವಿಚಾರಣಾಧಿಕಾರಿಯನ್ನೂ ನೇಮಕ ಮಾಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರು 2025ರ ಅಕ್ಟೋಬರ್‌ನಲ್ಲಿ ಕಸಾಪ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಜೋಶಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳದ ಕಾರಣ, ಆಡಳಿತಾಧಿಕಾರಿ ಅವಧಿಯನ್ನು ‘ಮುಂದಿನ ಮೂರು ತಿಂಗಳು ಅಥವಾ ಸರ್ಕಾರದಿಂದ ಅಂತಿಮ ತೀರ್ಮಾನವಾಗುವವರೆಗೆ’ ವಿಸ್ತರಿಸಿ ಡಿ.30ರಂದೇ ಇಲಾಖೆ ಆದೇಶ ಹೊರಡಿಸಿದೆ. 

‘ಕಸಾಪ ಸದಸ್ಯತ್ವ ರದ್ದುಮಾಡಿ’

‘ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಕಸಾಪ ಕಚೇರಿಯಲ್ಲಿ ನಾಟಕೀಯ ಪ್ರಸಂಗ ನಡೆಸಿದ ಮಹೇಶ ಜೋಶಿ ಅವರ ನಡೆ ಖಂಡನೀಯ. ಅಧಿಕಾರ ಕೇಳುವ ನೆಪದಲ್ಲಿ ಪ್ರತಿಭಟನೆ ಮಾಡುವ ಬೆದರಿಕೆ ಹಾಕುವ ಅವರ ನಡೆ ಸಾಹಿತ್ಯ ಪರಿಷತ್ತಿನ ಚರಿತ್ರೆಗೆ ಕಳಂಕ ತಂದಿದೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು. ಅವರ ಸದಸ್ಯತ್ವವನ್ನೂ ರದ್ದುಪಡಿಸಿ ಸಾಹಿತ್ಯ ಪರಿಷತ್ತಿನ ಗೌರವ  ಕಾಪಾಡಬೇಕು’ ಎಂದು ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.