ಯಲಹಂಕ: ಇತಿಹಾಸ ಪ್ರಸಿದ್ಧ ವಹ್ನಿಕುಲ ಕ್ಷತ್ರಿಯ ಆರಾಧ್ಯದೇವಿ ಮಹೇಶ್ವರಮ್ಮನವರ ಹೂವಿನ ಕರಗ ಮಹೋತ್ಸವ ಹಾಗೂ ವಿವಿಧ ದೇವರುಗಳ ಫಲ್ಲಕ್ಕಿ ಉತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಬಜಾರ್ ರಸ್ತೆಯಲ್ಲಿರುವ ಮಹೇಶ್ವರಮ್ಮನವರ ದೇವಾಲಯದಿಂದ ಬುಧವಾರ ಮಧ್ಯರಾತ್ರಿ 1.45ಕ್ಕೆ ಹೊರಟ ಹೂವಿನ ಕರಗ, ಕೋಟೆಬೀದಿ, ಬೆಸ್ತರಬೀದಿ, ಕಾಮಾಕ್ಷಮ್ಮ ಬಡಾವಣೆ, ಹೊಸಬೀದಿ, ಗಾಂಧಿನಗರ, ಮನವರ್ತಿ ತೋಟ, ಡೌನ್ ಬಜಾರ್ ರಸ್ತೆ, ಮಾರುತಿನಗರ ಹಾಗೂ ವೆಂಕಟಾಲ ಮತ್ತಿತರ ಬಡಾವಣೆಗಳಲ್ಲಿ ಸಂಚರಿಸಿ, ಬೆಳಗ್ಗೆ 9.15ಕ್ಕೆ ಮತ್ತೆ ದೇವಾಲಯಕ್ಕೆ ಆಗಮಿಸಿತು.
ಶಕ್ತಿದೇವತೆ ಮಹೇಶ್ವರಮ್ಮನವರ ಕರಗ, ಮನೆಗಳ ಮುಂದೆ ಬಂದಾಗ ಮಹಿಳೆಯರು ಆರತಿಬೆಳಗಿ ಹೂವಿನ ಅರ್ಚನೆಮಾಡಿ ಭಕ್ತಿಯಿಂದ ಸ್ವಾಗತಿಸಿದರು. ಸುತ್ತಮುತ್ತಲ ಗ್ರಾಮಗಳ 30 ದೇವರುಗಳ ಅಲಂಕೃತಗೊಂಡಿದ್ದ ಪಲ್ಲಕ್ಕಿ ಉತ್ಸವ ಕರಗ ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಕರಗ ವೀಕ್ಷಿಸಿದರು. ಮುನಿರಾಜು ಅವರು 4ನೇ ಭಾರಿಗೆ ಕರಗ ಹೊತ್ತಿದ್ದರು.
ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಕೆರೆಯ ಆವರಣದಲ್ಲಿರುವ ಕರಗಮಂಟಪವನ್ನು ವಿಶೇಷ ಹೂವುಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗಂಗಮ್ಮ ದೇವಿಗೆ ವಿಶೇಷಪೂಜೆ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.