
ಸಂಕ್ರಾತಿ ಹಬ್ಬದ ಪ್ರಯುಕ್ತ ಜ್ಞಾನಗಂಗಾ ನಗರದಲ್ಲಿ ಜನರು ಜಾನುವಾರುಗಳನ್ನು ಕಿಚ್ಚು ಹಾಯಿಸಿದರು
–ಚಿತ್ರ: ಪುಷ್ಕರ್ ವಿ
ಬೆಂಗಳೂರು: ವರ್ಷದ ಪ್ರಥಮ ಹಬ್ಬವಾದ ಸಂಕ್ರಾಂತಿಯನ್ನು ನಗರದೆಲ್ಲೆಡೆ ಸಂಭ್ರಮ ಸಡಗರದಿಂದ ಗುರುವಾರ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮನೆ ಮನೆಗಳೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಚಿಣ್ಣರು, ಮಹಿಳೆಯರು ಹೊಸ ಬಟ್ಟೆ ತೊಟ್ಟು, ಎಳ್ಳು–ಬೆಲ್ಲ ಮತ್ತು ಕಬ್ಬಿನ ಜಲ್ಲೆಯನ್ನು ಹಂಚಿ ಸಂಭ್ರಮಿಸಿದರು. ಮನೆಗಳಲ್ಲಿ ಪೊಂಗಲ್ ತಯಾರಿಸಿ, ಕುಟುಂಬದ ಸದಸ್ಯರು ಒಟ್ಟಾಗಿ ಸವಿದರು. ನಗರದ ಮೈದಾನಗಳಲ್ಲಿ ನಡೆದ ರಾಸುಗಳಿಗೆ ಕಿಚ್ಚು ಹಾಯಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಧಾನ್ಯಗಳ ರಾಶಿ ಪೂಜೆಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು.
ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮಿ ನರಸಿಂಹ ದೇವಸ್ಥಾನ, ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ಕೆ.ಆರ್.ಮಾರುಕಟ್ಟೆಯ ಕೋಟೆ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಯಶವಂತಪುರ ಸರ್ಕಲ್‍ನ ಗಾಯತ್ರಿ ದೇವಸ್ಥಾನ, ಜೆ.ಪಿ.ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿಯ ದೇವಗಿರಿ ವೆಂಕಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಪ್ರಸಾದ ವಿತರಣೆ: ದೇವರ ದರ್ಶನಕ್ಕೆ ಸರದಿಯಲ್ಲಿ ಜನರು ನಿಂತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಭಕ್ತರಿಗೆ ಪೊಂಗಲ್ ಮತ್ತು ಕೋಸಂಬರಿ ಪ್ರಸಾದ ನೀಡಲಾಯಿತು. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಕೆಲವೆಡೆ ಎಳ್ಳು–ಬೆಲ್ಲದ ಮಿಶ್ರಣವನ್ನು ವಿತರಿಸಲಾಯಿತು.
ಹಬ್ಬದ ಪ್ರಯುಕ್ತ ಕೆ.ಆರ್.ಮಾರುಕಟ್ಟೆ, ಜಯನಗರ, ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ ಕಬ್ಬಿನ ಜಲ್ಲೆ, ಹೂವು, ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ರಾಜರಾಜೇಶ್ವರಿನಗರ, ಮಲ್ಲೇಶ್ವರ, ಮತ್ತಿಕೆರೆ, ಯಶವಂತಪುರ, ಯಲಹಂಕ ಉಪನಗರ, ಪದ್ಮನಾಭ ನಗರದಲ್ಲಿ ವಿವಿಧ ಸಂಸ್ಥೆಗಳು ರಾಸುಗಳನ್ನು ಕಿಚ್ಚು ಹಾಯಿಸುವ ಆಚರಣೆ ನಡೆಸಿದವು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಲೋಕಭವನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು. ಕನ್ನಡ ಯುವಜನ ಸಂಘವು ‘ಸಂಕ್ರಾಂತಿ; ಪುಣ್ಯ ಕಾಲದ ಆರಂಭ’ ವಿಷಯದ ಮೇಲೆ ಉಪನ್ಯಾಸ ಹಮ್ಮಿಕೊಂಡಿತ್ತು. ಚಿಂತಕ ಅಜನೀಶ್ ನಾಗೇಶ್ ಕಡಬ ಉಪನ್ಯಾಸ ನೀಡಿದರು.
ಯಲಹಂಕ: ಕೋಗಿಲು ಗ್ರಾಮದ ವೇಣುಗೋಪಾಲಸ್ವಾಮಿ ಭಜನಾ ಮಂಡಳಿ ವತಿಯಿಂದ ಧನುರ್ಮಾಸದ ಭಜನಾ ಮೆರವಣಿಗೆ ನಡೆಸಲಾಯಿತು. ಬೆಳಿಗ್ಗೆ 5.30ಕ್ಕೆ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಆರಂಭವಾದ ಮೆರವಣಿಗೆ, ಗ್ರಾಮದ ಪ್ರಮುಖ ಬೀದಿಗಳು ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ಸಂಚರಿಸಿತು.
ಗರುಡುಗಂಬದ ಸಮೇತ ವಾದ್ಯಗಳನ್ನು ನುಡಿಸಿಕೊಂಡು ದೇವರ ನಾಮಗಳನ್ನು ಹಾಡುವುದರೊಂದಿಗೆ, ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಮೆರವಣಿಗೆಯಲ್ಲಿ ಸಾಗಿದರು. ಅನ್ನಪೂರ್ಣೇಶ್ವರಿ, ಮಾರಮ್ಮ, ಪಿಳ್ಳೇಕಮ್ಮ ಹಾಗೂ ಗ್ರಾಮದೇವತೆ ಪೂಜಾ ಮಹಾಲಕ್ಷ್ಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಗೋಪೂಜೆ ಮಾಡಲಾಯಿತು.
ಬೊಮ್ಮನಹಳ್ಳಿ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದಲ್ಲಿ ವಿವಿಧ ಧರ್ಮಿಯರು ಒಂದೆಡೆ ಸೇರಿ ಸೌಹಾರ್ದ ಸುಗ್ಗಿಯನ್ನು ಸಂಭ್ರಮದಿಂದ ಆಚರಿಸಿದರು. ಪರಸ್ಪರ ಎಳ್ಳು–ಬೆಲ್ಲ ಹಂಚಿ, ಸ್ಥಳದಲ್ಲೇ ಪೊಂಗಲ್ ತಯಾರಿಸಿ ಸವಿದರು.
ಆಚರಣೆಯಲ್ಲಿ ಭಾಗವಹಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಹಿಂದೆ ಸಂಕ್ರಾಂತಿ ದಿನದಂದು ರಾಸುಗಳಿಗೆ ಸಿಂಗರಿಸಿ, ಕಿಚ್ಚು ಹಾಯಿಸುತ್ತಿದ್ದೆವು. ಬೆಂಗಳೂರು ನಗರೀಕರಣಗೊಂಡ ನಂತರ ಸುಗ್ಗಿ ಹಬ್ಬ ಅಪರೂಪವಾಗುತ್ತಿದೆ. ಇಂತಹ ಆಚರಣೆಗಳ ಮೂಲಕ ಸುಗ್ಗಿ ಹಬ್ಬವನ್ನು ಮುಂದುವರಿಸಬೇಕು. ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಬದುಕನ್ನು ಸಾಗಿಸಬೇಕು. ಹಬ್ಬಗಳ ಮೂಲಕ ಭವಿಷ್ಯದ ಪೀಳಿಗೆಗೆ ಉತ್ತಮ ಸಂದೇಶವನ್ನು ತಲುಪಿಸಬೇಕು ಎಂದರು.
ಯಲಹಂಕ: ‘ಭಾರತೀಯರಾದ ನಾವೆಲ್ಲರೂ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳ ಮೂಲಕ ಒಗ್ಗಟ್ಟಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದ ಎನ್.ಟಿ.ಐ ಮೈದಾನದಲ್ಲಿ ಬಿಜೆಪಿ ಮುಖಂಡ ಎ.ರವಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಸಂಕ್ರಾಂತಿ ಸಂಭ್ರಮ, ಅವರೆಬೇಳೆ ಮೇಳ ಹಾಗೂ ದೇಸಿ ಕ್ರೀಡೆಗಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಂಕ್ರಾಂತಿ ವಿಶೇಷವಾಗಿ ರೈತರ ಹಬ್ಬವಾಗಿದೆ. ಬೆಳೆದ ಬೆಳೆಯನ್ನು ರಾಶಿಮಾಡಿ ಸಂಭ್ರಮಿಸುವ ಸಂದರ್ಭವಾಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು. ರಾಶಿಪೂಜೆ, ಎತ್ತು ಮತ್ತು ಹಸುಗಳ ಪ್ರದರ್ಶನ, ಎತ್ತಿನಬಂಡಿ ಸವಾರಿ, ವಸ್ತುಪ್ರದರ್ಶನ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ರಾಜರಾಜೇಶ್ವರಿನಗರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾಳಗಾಳದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಉತ್ಸವದಲ್ಲಿ ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಅವರು ಗೋಪೂಜೆ ನೆರವೇರಿಸಿ, 15 ಸಾವಿರ ಕುಟುಂಬಗಳಿಗೆ ಎಳ್ಳು–ಬೆಲ್ಲ, ಕಡಲೆಕಾಯಿ, ಗೆಣಸು, ಅವರೆಕಾಯಿ, ಕಬ್ಬನ್ನು ವಿತರಿಸಿದರು.
ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ದವಸ, ಧಾನ್ಯಗಳ ರಾಶಿಗೆ ಪೂಜೆ ನೆರವೇರಿಸಿದರು. ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹನುಮಂತರಾಯಪ್ಪ, ಕಾಂಗ್ರೆಸ್ ಮುಖಂಡ ಎನ್.ಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.