
ಬೆಂಗಳೂರು: ಮಕ್ಕಳ ಆಲೋಚನೆಗಳ ಒಳಗೆ ಮೊಳಕೆಯೊಡೆಯುವ ಕಲೆ, ಅವರ ಕೈಗಳು, ಕಂಠದ ಮೂಲಕ ವ್ಯಕ್ತವಾಗುತ್ತದೆ. ಆದ್ದರಿಂದ ನಾವು ಮಕ್ಕಳ ಮನೋಲೋಕವನ್ನು ಅರಳಿಸಬೇಕು ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
ಬಾಲಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಕಲೆ ಮಕ್ಕಳ ಕಲ್ಪನಾ ಲೋಕದಲ್ಲಿ ಅರಳುತ್ತದೆ. ಮಕ್ಕಳ ಆಲೋಚನೆಗಳ ಒಳಗೆ ಮೊಳಕೆಯೊಡೆಯುವ ಕಲೆ, ಅವರ ಕೈಗಳ ಮೂಲಕ, ಕಂಠದ ಮೂಲಕ ವ್ಯಕ್ತವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮಣ್ಣಿನ, ಪುಸ್ತಕಗಳ ಒಡನಾಟ ಬೇಕು. ಮೊಬೈಲ್ ಸಹವಾಸ ಮಕ್ಕಳಲ್ಲಿನ ಸೃಜನಶೀಲತೆಯನ್ನು ಮುದುಡುವಂತೆ ಮಾಡುತ್ತಿದೆ. ಉದಾಹರಣೆಗೆ ದೆವ್ವ ಮತ್ತು ಭೂತಗಳು ಹೇಗೆ ಇರುತ್ತವೆ, ಹೇಗೆ ಕಾಣುತ್ತವೆ ಎನ್ನುವುದನ್ನು ಪುಸ್ತಕಗಳ ಒಡನಾಟದಲ್ಲಿರುವ ಮಕ್ಕಳಿಗೆ, ಮೊಬೈಲ್ ಸಹವಾಸದಲ್ಲಿರುವ ಮಕ್ಕಳಿಗೆ ಕೇಳಿ ನೋಡಿ. ಓದುವ ಮಕ್ಕಳು ವಿವರಿಸುವ ರೀತಿ ವಿಶಾಲವಾಗಿರುತ್ತದೆ. ಅವರ ಕಲ್ಪನಾ ಲೋಕದಲ್ಲಿ ಹುಟ್ಟುವ ದೆವ್ವ, ಭೂತಗಳು ವೈವಿಧ್ಯಮಯವಾಗಿರುತ್ತವೆ. ಮೊಬೈಲ್ ಮಕ್ಕಳು ಕೇವಲ ನೋಡಿದ್ದನ್ನು ವಿವರಿಸುತ್ತವೆ. ಇಲ್ಲಿ ಕಲ್ಪನಾಲೋಕ ಇರುವುದಿಲ್ಲ’ ಎಂದು ವಿವರಿಸಿದರು.
‘ಈ ಕಾರಣಕ್ಕೇ ಮೊಬೈಲ್ ಬಿಡಿ, ಪುಸ್ತಕ ಹಿಡಿ ಎನ್ನುವ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ. ಆದ್ದರಿಂದ ನಾವೆಲ್ಲಾ ಸಾಧ್ಯವಾದಷ್ಟೂ ಮಕ್ಕಳ ಮನೋಲೋಕ ಅರಳಿಸುವ ಕಾರ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಈ ಕಾರ್ಯವನ್ನು ಜವಾಹರಲಾಲ್ ನೆಹರೂ ಅವರು ಸ್ಥಾಪಿಸಿದ ಬಾಲಭವನ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಕ್ಕಳು ಮತ್ತು ಪೋಷಕರಲ್ಲಿ ಭಾವನೆಗಳು ಶ್ರೀಮಂತವಾಗಿರಬೇಕು. ಇದಕ್ಕೆ ಮಕ್ಕಳು, ಪೋಷಕರ ನಡುವೆ ಸಂವಹನ ಹೆಚ್ಚೆಚ್ಚು ನಡೆಯಬೇಕು. ಪರಸ್ಪರ ಭಾವನೆ ಮತ್ತು ನಿರೀಕ್ಷೆಗಳನ್ನು ವಿನಿಮಯ ಮಾಡಿಕೊಳ್ಳಬೇಕು. ತಂದೆ, ತಾಯಿಯರಿಗೆ ಮಕ್ಕಳ ವಿಚಾರದಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಪೋಷಕರು ಶ್ರಮಿಸುವುದೇ ಮಕ್ಕಳಿಗಾಗಿ. ಹೀಗಾಗಿ ವೃದ್ಧ ಪೋಷಕರನ್ನು ನಾವು ಆರೈಕೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.