ADVERTISEMENT

ತ್ಯಾಜ್ಯದಿಂದ ವಾಸನೆ, ಕೊಳಕು ರಹಿತ ಗೊಬ್ಬರ

ಸುಬ್ಬರಾಯನಪಾಳ್ಯ ಘಟಕದಲ್ಲಿ ರುದ್ರಾಕ್ಷ ಸಂಸ್ಥೆಯಿಂದ ತಂತ್ರಜ್ಞಾನ ಬಳಸಿ ತಯಾರಿಕೆ

Published 31 ಜುಲೈ 2022, 2:12 IST
Last Updated 31 ಜುಲೈ 2022, 2:12 IST
ಸುಬ್ಬರಾಯನಪಾಳ್ಯ ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಹಸಿ ಕಸ ಸುರಿಯುತ್ತಿರುವಾಗಲೇ ಮಿಶ್ರಣ ಹಾಕುತ್ತಿರುವುದು
ಸುಬ್ಬರಾಯನಪಾಳ್ಯ ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಹಸಿ ಕಸ ಸುರಿಯುತ್ತಿರುವಾಗಲೇ ಮಿಶ್ರಣ ಹಾಕುತ್ತಿರುವುದು   

ಬೆಂಗಳೂರು: ಹೊಸ ತಂತ್ರಜ್ಞಾನದ ಮೊರೆಹೋಗಿರುವ ಬಿಬಿಎಂಪಿಯು ದುರ್ವಾಸನೆ, ಕೊಳಕು ನೀರು, ನೊಣ–ಸೊಳ್ಳೆ ಇವೆಲ್ಲವನ್ನೂ ಇಲ್ಲವಾಗಿಸಿ, ಕಸವನ್ನು ಗೊಬ್ಬರವಾಗಿಸುವ ಕಾರ್ಯಕ್ಕೆ ಕೈಹಾಕಿದೆ.

ನಗರದ ಹೊರವಲಯದ ಸುಬ್ಬರಾಯನಪಾಳ್ಯ ಘನತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಕಸಕ್ಕೆ, ಅದರಿಂದಾಗಿರುವ ಗೊಬ್ಬರಕ್ಕೆ ಬೆಂಕಿ ಬಿದ್ದಿರುವ ಪ್ರಕರಣಗಳು ನಡೆದವು. ಸ್ಥಳೀಯರ ಆಕ್ರೋಶದಿಂದಾಗಿ ಈ ಘಟಕ ಸ್ಥಗಿತಗೊಳಿಸಲಾಗಿತ್ತು. ಹೈಕೋರ್ಟ್‌ ಎಲ್ಲ ಸಂಸ್ಕರಣ ಘಟಕಗಳನ್ನು ಆರಂಭಿಸಬೇಕು ಎಂದು ಸೂಚಿಸಿದ ಮೇಲೆ, ರುದ್ರಾಕ್ಷ ವೇಸ್ಟ್‌ ಯುಟಿಲಿಟೀಸ್‌ ಆರ್‌ ಆ್ಯಂಡ್‌ ಡಿ ಸಂಸ್ಥೆಯ ವಿಜ್ಞಾನಿಗಳಿಗೆ, ಅವರ ತಂತ್ರಜ್ಞಾನವನ್ನು ಸಾಬೀತುಪಡಿಸಲು ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ.

‘15 ದಿನಗಳಿಂದ ಪ್ರತಿ ನಿತ್ಯ 5 ಕಂಪ್ಯಾಕ್ಟರ್‌ಗಳ ಹಸಿ ತ್ಯಾಜ್ಯವನ್ನು ಇಲ್ಲಿ ಹಾಕಲಾಗುತ್ತಿದೆ. ‘ಏರೋಬಿಕ್‌ ಸ್ಪಾಂಜ್‌ ಬೆಡ್‌ ಆರ್ಗ್ಯಾನಿಕ್‌ ಮೆಥಡ್‌’ನಲ್ಲಿ ಹಸಿ ಕಸವನ್ನು ಗೊಬ್ಬರ ಮಾಡಲಾಗುತ್ತದೆ. ಕೃಷಿ, ಕೈಗಾರಿಕೆ ತ್ಯಾಜ್ಯದಿಂದ ತಯಾರಿಸಲಾಗಿರುವ ಮಿಶ್ರಣವನ್ನು ಬಳಸುತ್ತಿದ್ದೇವೆ. ಏರೋಬಿಕ್‌ ಸ್ಪಾಂಜ್‌ ಬೆಡ್‌ ಮೇಲೆ ಹಸಿ ಕಸವನ್ನು ಸುಮಾರು 2 ಮೀಟರ್‌ನಷ್ಟು ಸುರಿಯಲಾಗುತ್ತದೆ. ನಂತರ ಮಿಶ್ರಣವನ್ನು ಹಾಕುತ್ತೇವೆ. ಇದರಿಂದ 5 ನಿಮಿಷದಲ್ಲಿ ವಾಸನೆ ಹೋಗುತ್ತದೆ. ನೊಣವೂ ಇರುವುದಿಲ್ಲ. 10 ನಿಮಿಷದ ನಂತರ ಕಸವನ್ನು ಪ್ಲಾಸ್ಟಿಕ್‌ ಹಾಳೆಯಿಂದ ಮುಚ್ಚಲಾಗುತ್ತದೆ’ ಎಂದು ರುದ್ರಾಕ್ಷ ಸಂಸ್ಥೆಯ ಡಾ. ಸುನೀತಾ ತಿಳಿಸಿದರು.

ADVERTISEMENT

‘ಹಸಿ ಕಸದಿಂದ ಬರುವ ಕೊಳಕು ನೀರನ್ನು ‘ಸ್ಪಾಂಜ್‌ ಬೆಡ್‌’ ಹೊರಗೆ ಹರಿಯದಂತೆ ತಡೆಯುತ್ತದೆ. ಪೇಟೆಂಟ್‌ ಹೊಂದಿರುವ ನಮ್ಮ ಮಿಶ್ರಣವನ್ನು ಆಗಾಗ ಹಾಕುತ್ತೇವೆ. 45 ದಿನಗಳಿಂದಲೇ ಸತ್ವಯುತ ಗೊಬ್ಬರ ಪಡೆಯಬಹುದು. ಈ ಗೊಬ್ಬರವನ್ನು ಐಸಿಎಆರ್‌–ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಪ್ರಮಾಣೀಕರಿಸಿದೆ’ ಎಂದರು. ‘ಈ ಗೊಬ್ಬರದಲ್ಲಿ ಶೇ 30ರಿಂದ 40ರಷ್ಟು ತೇವಾಂಶ ಇರುತ್ತದೆ. ರೈತರು ತಮ್ಮ ಹೊಲಗಳಿಗೆ ವರ್ಷಕ್ಕೆ ಒಂದು ಬಾರಿ ಹಾಕಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಸಾವಯವ ಕೃಷಿಗೂ ಇದು ಸಹಕಾರಿ’ ಎಂದರು.

‘ಇಲ್ಲಿ ಸುರಿಯುವುದೇ ಬೇಡ’

‘ಬಿಬಿಎಂಪಿ ಅಧಿಕಾರಿಗಳು ಹಿಂದೆಯೂ ಸಾಕಷ್ಟು ಬಾರಿ ‘ಕಸದಿಂದ ಗೊಬ್ಬರ ಮಾಡುತ್ತೇವೆ, ವಾಸನೆ ಬರೊಲ್ಲ‘ ಎಂದು ಹೇಳಿದ್ದರು. ಆನಂತರ ಮನೆಯಲ್ಲಿ ಕುಳಿತುಕೊಳ್ಳಲಾಗದಂತಹ ವಾಸನೆ. ನೊಣ, ಸೊಳ್ಳೆ.. ಆಗ ನಾವು ಈ ಘಟಕವನ್ನು ಬಂದ್‌ ಮಾಡಿಸಿದ್ದೆವು’ ಎಂದು ಸುಬ್ಬರಾಯನಪಾಳ್ಯದ ನಾಗರಿಕರು ಪ್ರತಿಕ್ರಿಯಿಸಿದರು.

‘ಇದೀಗ ಹೊಸದಾಗಿ ಮಾಡುತ್ತೇವೆ ಎಂದು ಬಂದಿದ್ದಾರೆ. ದಿನಕ್ಕೆ 5 ಲೋಡ್‌ ಬರುತ್ತಿದೆ, ಕಸ ಎಲ್ಲಿದೆ ಗೊತ್ತಾಗುತ್ತಿಲ್ಲ. ಇದನ್ನು ಅವರು ಹೀಗೆಯೇ ಮುಂದುವರಿಸಿದರೆ ಪರವಾಗಿಲ್ಲ. ಕೆಲವು ತಿಂಗಳ ನಂತರ ಮತ್ತೆ ರಾಶಿ ಹಾಕಿದರೆ ನಾವು ವಾಸಿಸಲು ಸಾಧ್ಯವಾಗುವುದಿಲ್ಲ’ ಎಂದು ಸ್ಥಳೀಯರಾದ ದೇವರಾಜ್‌ ಹಾಗೂ ಗೋಪಾಲಕೃಷ್ಣ ಹೇಳಿದರು.

‘ಇನ್ನೂ ಪ್ರಾಯೋಗಿಕ ಹಂತದಲ್ಲಿ’

‘ಇದು ಗೊಬ್ಬರ ತಯಾರಿಸುವ ಹೊಸ ತಂತ್ರಜ್ಞಾನ. ವಾಸನೆ, ಕೊಳಕು ನೀರು, ನೊಣ ಬರುವುದಿಲ್ಲ, ಜೊತೆಗೆ ಹಸಿ ಕಸವೆಲ್ಲವೂ ಗೊಬ್ಬರವಾಗುತ್ತದೆ ಎಂದು ರುದ್ರಾಕ್ಷ ಸಂಸ್ಥೆಯವರು ಹೇಳಿದ್ದಾರೆ. ಅದನ್ನು ಮಾಡಿ ತೋರಿಸಲು ಅವಕಾಶ ಮಾಡಿಕೊಡಲಾಗಿದೆ. ಇನ್ನು 15 ದಿನಗಳಾಗಿವೆಯಷ್ಟೆ. 60 ದಿನಗಳ ನಂತರ ಇದರ ವಾಸ್ತವ ಅರಿವಾಗುತ್ತದೆ’ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.