ಪ್ಯಾರಾ ಅಥ್ಲೀಟ್ ಮಾಲತಿ ಹೊಳ್ಳ ಅವರಿಗೆ ‘ರೇವಾ-ಜೀವಮಾನ ಸಾಧನೆ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಲಹಂಕ: ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ಯಾರಾ ಅಥ್ಲೀಟ್ ಮಾಲತಿ ಹೊಳ್ಳ ಮತ್ತು ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರಿಗೆ ‘ರೇವಾ-ಜೀವ ಮಾನ ಸಾಧನೆ’ ಮತ್ತು ಇತಿಹಾಸತಜ್ಞ ವಿಕ್ರಮ್ ಸಂಪತ್ ಅವರಿಗೆ ‘ರೇವಾ-ಎಕ್ಸಲೆನ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಲತಿ ಹೊಳ್ಳ, ಪೋಲಿಯೊದೊಂದಿಗಿನ ತಮ್ಮ ಹೋರಾಟ ಜೀವನದ ಕುರಿತು ವಿವರಿಸಿದರು. ‘ವಯಸ್ಸಾಗುವುದು ದೇಹಕ್ಕೇ ಹೊರತು ಮನಸ್ಸು ಮತ್ತು ವಿಚಾರಧಾರೆಗಳಿಗಲ್ಲ. ನೋವಾಗುವುದು ದೇಹದ ಭಾಗಗಳಿಗೆ, ಆದರೆ ಆಲೋಚನೆಗಳಿಗಲ್ಲ. ನನ್ನ ಅಂಗಾಂಗ ಊನವಾಗಿದ್ದರೂ ನನ್ನ ಜೀವನದ ಗುರಿ, ಕನಸುಗಳು ಹಾಗೂ ದೃಢನಿರ್ಧಾರಗಳಿಗೆ ಎಂದಿಗೂ ಊನವಾಗಿಲ್ಲ’ ಎಂದರು.
ವಿಕ್ರಮ್ ಸಂಪತ್ ಮಾತನಾಡಿ, ‘ಈ ಹಿಂದೆ ಭಾರತದ ನಳಂದಾ, ತಕ್ಷಶಿಲಾ, ವಿಕ್ರಮಶಿಲಾ ಹಾಗೂ ಓದಂಪುರಿಯಂತಹ ವಿಶ್ವವಿದ್ಯಾಲಯಗಳಿಗೆ ಪಾಶ್ಚಿಮಾತ್ಯರು ಬಂದು ಜ್ಞಾನಾರ್ಜನೆ ಮಾಡುತ್ತಿದ್ದರು. ಕಾಲಕ್ರಮೇಣ ತೀವ್ರ ಆಕ್ರಮಣಗಳು ಮತ್ತು ವಸಾಹತುಶಾಹಿ ಪರಿಸ್ಥಿತಿಯಿಂದಾಗಿ ಭಾರತ ಬದಲಾಗಿತ್ತು. ಆದರೆ ಇದೀಗ ಭಾರತವು ತನ್ನ ಇತಿಹಾಸದ ವೈಭವವನ್ನು ಮರಳಿ ಪಡೆಯುತ್ತಿದ್ದು, ಇಂದಿನ ವಿಶ್ವವಿದ್ಯಾಲಯಗಳು ಇದಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ’ ಎಂದು ತಿಳಿಸಿದರು.
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ಮಾತನಾಡಿ, ‘ನಾವು ಬದುಕುತ್ತಿರುವ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದೊಂದಿಗೆ ಈ ವಿಶ್ವ ವಿದ್ಯಾಲಯವನ್ನು ಆರಂಭಿಸಲಾಯಿತು. 240 ವಿದ್ಯಾರ್ಥಿಗಳಿಂದ ಆರಂಭವಾಗಿ ಇಂದು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 1500ಕ್ಕೂ ಹೆಚ್ಚು ಬೋಧಕರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.
ಡಾ.ದೇವಿಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಲು ಬಂದಿರಲಿಲ್ಲ. ಹೀಗಾಗಿ ಅವರಿಗೆ ನೀಡಿದ್ದ ‘ಜೀವಮಾನ ಸಾಧನೆ’ ಪ್ರಶಸ್ತಿ ಫಲಕವನ್ನು ಆಯೋಜಕರು ಸಭಿಕರಿಗೆ ತೋರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.