ADVERTISEMENT

ಮನೆಯಂಗಳದಲ್ಲಿ ಮಾತುಕತೆ | ಸಂಕಷ್ಟದ ದಿನಗಳಲ್ಲಿ ಕೈಹಿಡಿದ ಕವಿತೆ: ಪ್ರೊ. ಮಾಲತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 21:30 IST
Last Updated 20 ಸೆಪ್ಟೆಂಬರ್ 2025, 21:30 IST
ಕಾರ್ಯಕ್ರಮದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರನ್ನು ಗೌರವಿಸಲಾಯಿತು. ಬಲವಂತರಾವ್ ಪಾಟೀಲ, ಬನಶಂಕರಿ ವಿ. ಅಂಗಡಿ ಉಪಸ್ಥಿತರಿದ್ದರು 
ಕಾರ್ಯಕ್ರಮದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರನ್ನು ಗೌರವಿಸಲಾಯಿತು. ಬಲವಂತರಾವ್ ಪಾಟೀಲ, ಬನಶಂಕರಿ ವಿ. ಅಂಗಡಿ ಉಪಸ್ಥಿತರಿದ್ದರು    

ಬೆಂಗಳೂರು: ‘ಬದುಕಿನ ಸಂಕಷ್ಟದ ದಿನಗಳಲ್ಲಿ ಕವಿತೆಗಳು ಕೈಹಿಡಿದು, ಬದುಕಿಗೆ ಬೆಳಕಾದವು’ ಎಂದು ಲೇಖಕಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮನದಾಳ ಹಂಚಿಕೊಂಡರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿದ ಅವರು, ಬದುಕಿನ ವಿವಿಧ ಘಟನೆಗಳನ್ನು ಸ್ಮರಿಸಿಕೊಂಡರು. 

‘ಮದುವೆಯಾಗಿ ಐದು ವರ್ಷಗಳು ಕಳೆಯುವಷ್ಟರಲ್ಲಿಯೇ ನನ್ನ ಬಾಳಿನಲ್ಲಿ ಬಿರುಗಾಳಿ ಎದ್ದು, ದಾಂಪತ್ಯ ಜೀವನ ಕೊನೆಗೊಂಡಿತು. ಆ ವೇಳೆ ಆಘಾತಕ್ಕೆ ಒಳಗಾಗಿದ್ದೆ. ಆದರೆ, ಎದೆಗುಂದಲಿಲ್ಲ. ಕೋರ್ಟ್, ಕಚೇರಿಗೆ ಅಲೆಯದೆ ಎರಡೂ ಮಕ್ಕಳನ್ನು ಸಾಕಿದೆ. ದುಃಖದಿಂದ ಹೊರಬರಲು ಕವಿತೆ ರಚನೆ ಮಾಡಿದೆ. ಹೀಗಾಗಿ, 32ನೇ ವಯಸ್ಸಿಗೆ ಕವಿತೆ ರಚನೆ ಮಾಡಲು ಪ್ರಾರಂಭಿಸಿದೆ. ಸಾಹಿತ್ಯ ರಚನೆ ನನ್ನ ಕೈಹಿಡಿದು ಬೆಳೆಸಿತು’ ಎಂದು ಹೇಳಿದರು. 

ADVERTISEMENT

‘ನನ್ನ ಬಾಲ್ಯ ಕೂಡ ಕಷ್ಟದಿಂದ ಕೂಡಿತ್ತು. ನಮ್ಮವ್ವ ನನಗೆ ಮೂರು ವರ್ಷಗಳು ಇದ್ದಾಗ ತೀರಿ ಹೋದರು. ತಂದೆ ಮತ್ತೊಂದು ಮದುವೆ ಆದರು. ನಾವು ಒಂಬತ್ತು ಜನ ಮಕ್ಕಳು. ನಾನು ಅಜ್ಜಿಯ ಆಸರೆಯಲ್ಲಿ ಬೆಳೆದೆ. ಚಂದಮಾಮ ಪುಸ್ತಕಗಳು ಓದಿನ ಆಸಕ್ತಿ ಬೆಳೆಸಿದವು’ ಎಂದರು.

‘ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಸರ್ಕಾರ ನನ್ನನ್ನು ನೇಮಕ ಮಾಡಿದಾಗ ಹಲವು ಪುರುಷ ಸಾಹಿತಿಗಳು ಇವಳು ಹೆಣ್ಣು, ಇವಳಿಂದ ಏನು ಸಾಧ್ಯ ಎಂಬ ರೀತಿಯಲ್ಲಿ ಮಾತನಾಡಿದ್ದರು. ಆದರೆ, ಎದೆಗುಂದದೆ ಇಡೀ ರಾಜ್ಯ ಸುತ್ತಿ ಕಾರ್ಯಕ್ರಮ ರೂಪಿಸಿದೆ’ ಎಂದು ಸ್ಮರಿಸಿಕೊಂಡರು. 

‘ಮೋಸ, ದುಃಖಗಳನ್ನ ಮೀರಿ ಬೆಳೆದು ನಿಂತಿದ್ದೇನೆ. ಇದಕ್ಕೆ ನನ್ನಲ್ಲಿರುವ ಜೀವನೋತ್ಸಾಹ ಕಾರಣ. ಸಾಹಿತ್ಯ ರಚನೆ ಮಾಡಿದರೂ ಪುಸ್ತಕ ಪ್ರಕಾಶಕರು ಸಿಗುತ್ತಿರಲಿಲ್ಲ. ಹೀಗಾಗಿ, ಓದುಗರಿಗೆ ನಾನು ಹೆಚ್ಚು ತಲುಪಲು ಸಾಧ್ಯವಾಗಲಿಲ್ಲ’ ಎಂದು ಬೇಸರಪಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ, ಬನಶಂಕರಿ ವಿ. ಅಂಗಡಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.