ಬೆಂಗಳೂರು: ಬಾಲಕನನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಕೆರೆಯ ಬಳಿ ಎಸೆದಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಮಾನಂದ (8) ಕೊಲೆಯಾದ ಬಾಲಕ. ಬಿಹಾರದ ಆರೋಪಿ ಚಂದ್ರೇಶ್ವರ ಮತ್ತೂರು (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಬಾಲಕ ರಮಾನಂದ ಕುಟುಂಬ ಹಾಗೂ ಆರೋಪಿ ಚಂದ್ರೇಶ್ವರ ಮತ್ತೂರು ಕುಟುಂಬವು ಅಕ್ಕಪಕ್ಕದಲ್ಲೇ ನೆಲಸಿತ್ತು. ಎರಡೂ ಕುಟುಂಬಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇದೇ ದ್ವೇಷದಿಂದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ. ಮೃತದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಹೋಗಿ ರಾಯಸಂದ್ರ ಕೆರೆಯ ಬಳಿ ಎಸೆದಿದ್ದ ಎಂದು ಪೊಲೀಸರು ಹೇಳಿದರು.
ಮೇ 6ರಂದು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮಗು ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಮೂಲಗಳು ಹೇಳಿವೆ.
‘ಅನುಮಾನದ ಮೇರೆಗೆ ಆರೋಪಿಯ ಪುತ್ರಿಯನ್ನು ವಿಚಾರಣೆಗೆ ಒಳಪಡಿಸಲಾಯಿತು. ಬಾಲಕನನ್ನು ತಂದೆ ಅಪಹರಿಸಿ ಕೊಲೆ ಮಾಡಿರುವುದಾಗಿ ಆಕೆ ಬಾಯ್ಬಿಟ್ಟಿದ್ದಳು. ಕೊಲೆಯ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ತನ್ನನ್ನು ಕೊಲೆ ಮಾಡುವುದಾಗಿ ತಂದೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಹೇಳಿಕೆ ನೀಡಿದ್ದಳು. ಅದನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಯಿತು’ ಎಂದು ಪೊಲೀಸರು ಹೇಳಿದರು.
‘ಎರಡೂ ಕುಟುಂಬಗಳೂ ಬಿಹಾರದಿಂದ ನಗರಕ್ಕೆ ಬಂದು ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ರಾಯಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದವು. ಆರೋಪಿಗೆ ಇಬ್ಬರು ಪುತ್ರಿಯರು ಇದ್ದಾರೆ. ರಮಾನಂದ ಜೊತೆಗೆ ಆರೋಪಿಯ ಪುತ್ರಿಯರು ನಿತ್ಯ ಆಟ ಆಡುತ್ತಿದ್ದರು. ಆಟದ ವಿಚಾರಕ್ಕೆ ಮಕ್ಕಳ ಮಧ್ಯೆ ಗಲಾಟೆ ಆಗುತ್ತಿತ್ತು. ಇದನ್ನು ಆರೋಪಿ ಗಮನಿಸಿದ್ದ. ರಮಾನಂದ ಜತೆಗೆ ಆಟಕ್ಕೆ ಹೋಗದಂತೆ ತನ್ನ ಮಕ್ಕಳಿಗೆ ಆರೋಪಿ ತಾಕೀತು ಮಾಡಿದ್ದ. ಆದರೂ ಮಕ್ಕಳು ಆಟಕ್ಕೆ ಹೋಗುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.
ತನಿಖೆ ಮಾಡಿದಾಗ ಪಕ್ಕದ ಮನೆಯ ವ್ಯಕ್ತಿಯ ಜೊತೆಗೆ ಬಾಲಕ ಹೋಗಿರುವುದು ಗೊತ್ತಾಗಿತ್ತು. ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.ಸಾರಾ ಫಾತಿಮಾ, ಡಿಸಿಪಿ, ಆಗ್ನೇಯ ವಿಭಾಗ
‘ಮೇ 6ರಂದು ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಆರೋಪಿ, ಬಾಲಕನ ಮೇಲೆ ಹಲ್ಲೆ ನಡೆಸಿದ್ದ. ಬಾಲಕನ ತಾಯಿ ಮನೆಯ ಕೆಲಸಕ್ಕೆ ಹೋಗಿರುವುದು ಗೊತ್ತಾಗಿ ಅಪಹರಣ ಮಾಡಿದ್ದ. ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಹೋಗಿ ಕೆರೆಯ ಬಳಿ ಎಸೆದಿದ್ದ’ ಎಂದು ಪೊಲೀಸರು ಹೇಳಿದರು.
‘ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ತನ್ನ ಮಕ್ಕಳಿಗೆ ರಮಾನಂದ ಹೊಡೆಯುತ್ತಾನೆ ಹಾಗೂ ಆತನ ಪೋಷಕರು ತನ್ನ ಮನೆಯವರ ಜೊತೆಗೆ ಗಲಾಟೆ ಮಾಡುತ್ತಾರೆಂಬ ಕಾರಣಕ್ಕೆ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ತನಿಖೆ ಮುಂದುವರೆದಿದೆ’ ಎಂದು ಪೊಲೀಸರು ಹೇಳಿದರು.
ಮನೆ ಖಾಲಿ ಮಾಡಲು ಸೂಚಿಸಿದ್ದ ಮಾಲೀಕ:
‘ಆರೋಪಿ ಎರಡು ತಿಂಗಳಿಂದ ಮನೆಯ ಬಾಡಿಗೆ ಹಣ ಪಾವತಿ ಮಾಡಿರಲಿಲ್ಲ. ಖಾಲಿ ಮಾಡುವಂತೆಯೂ ಮನೆಯ ಮಾಲೀಕ ಸೂಚಿಸಿದ್ದರು ಎಂಬುದು ಗೊತ್ತಾಗಿದೆ. ಬಾಲಕನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಹೋಗುತ್ತಿರುವುದನ್ನು ಕೆಲವರು ಗಮನಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
ಹುಡುಕಾಟ ನಡೆಸಿದ್ದ ತಾಯಿ
ಮನೆಯ ಎದುರು ಮಕ್ಕಳು ಆಟ ಆಡುತ್ತಿರುವಾಗಲೇ ಆರೋಪಿ ಅಪಹರಣ ಮಾಡಿದ್ದಾನೆ. ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದು ನೋಡಿದಾಗ ರಮಾನಂದ ಇರಲಿಲ್ಲ. ಅಕ್ಕಪಕ್ಕದ ಮನೆಯವರನ್ನೂ ವಿಚಾರಿಸಿದ್ದರು. ಸುಳಿವು ಸಿಕ್ಕಿರಲಿಲ್ಲ. ಆರೋಪಿ ಮನೆಗೆ ತೆರಳಿ ನೋಡಿದಾಗ ಆತನ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.