ADVERTISEMENT

ಥಣಿಸಂದ್ರ ರಸ್ತೆಯಲ್ಲಿ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿಗೆ ₹10 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 16:17 IST
Last Updated 15 ನವೆಂಬರ್ 2025, 16:17 IST
   

ಬೆಂಗಳೂರು: ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ ₹10 ಸಾವಿರ ದಂಡ ವಿಧಿಸಲಾಗಿದೆ.

ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ನ.11 ರಂದು ರಾತ್ರಿ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ್ದರು. ಥಣಿಸಂದ್ರ ಮುಖ್ಯ ರಸ್ತೆ ಅಶ್ವತ್ಥನಗರದಲ್ಲಿ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಸುಡುತ್ತಿರುವುದನ್ನು ಕಂಡು ಸ್ಥಳಕ್ಕೆ ತೆರಳಿದ್ದರು.

ಬೆಂಕಿ ಹಚ್ಚಿ ಸುಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆ ವ್ಯಕ್ತಿ ನೀರು ಹಾಕಿ ನಂದಿಸಿದ್ದರು. ಈ ರೀತಿ ತ್ಯಾಜ್ಯ ಸುಡುವುದು ಕಾನೂನುಬಾಹಿರ ಆಗಿರುವುದರಿಂದ ದಂಡ ವಿಧಿಸಲು ಜಂಟಿ ಆಯುಕ್ತರಿಗೆ ಸೂಚಿಸಿದ್ದರು.

ADVERTISEMENT

ಮುಖ್ಯ ಆಯುಕ್ತರ ನಿರ್ದೇಶನದಂತೆ ಥಣಿಸಂದ್ರ ವಾರ್ಡ್‌ನ ಕಿರಿಯ ಆರೋಗ್ಯ ಪರಿವೀಕ್ಷಕ ಹಾಗೂ ಮಾರ್ಷಲ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಎಳನೀರು ಮಾರಾಟ ಮಾಡುವ ಇಝಾಜ್ ಖಾನ್ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿ ಎಂಬುದು ಖಚಿತಪಡಿಸಿಕೊಂಡು ದಂಡ ವಿಧಿಸಿದರು. ಇನ್ನು ಮುಂದೆ ರಸ್ತೆ ಬದಿಯಲ್ಲಿ ಕಸ ಎಸೆಯದಂತೆ, ಸುಡದಂತೆ ಇಝಾಜ್‌ ಖಾನ್‌ ಅವರಿಗೂ, ಸಾರ್ವಜನಿಕರಿಗೂ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.