
(ಸಾಂದರ್ಭಿಕ ಚಿತ್ರ)
ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ಠಾಣಾ ವ್ಯಾಪ್ತಿಯ ಮಂಜುನಾಥ ನಗರದ ವಿಜಯಲಕ್ಷ್ಮೀ ಬಡಾವಣೆಯಲ್ಲಿ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ನಟರಾಜ್ ಎಂಬವರು ಬಾಡಿಗೆಗೆ ನೀಡಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಕಂಡು ಪರೀಕ್ಷಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಹಾಸನದ ಮೋಹನ್ (45) ಕೊಲೆಯಾದವರು. ನಾಲ್ಕೈದು ದಿನಗಳ ಹಿಂದೆ ಕೊಲೆ ನಡೆದಿರಬೇಕು ಎಂದು ಅಂದಾಜಿಸಲಾಗಿದೆ.
ಎರಡು ತಿಂಗಳ ಹಿಂದೆ ಮೋಹನ್ ಕೃಷ್ಣ ಮತ್ತು ಬಿಂದು ಅಲಿಯಾಸ್ ಊರ್ವಶಿ ಎಂಬವವರು ಈ ಮನೆ
ಬಾಡಿಗೆಗೆ ಪಡೆದಿದ್ದರು. ತಾನು ಸಿನಿಮಾ ಸಹನಿರ್ದೇಶಕಿ ಎಂದು ಊರ್ವಶಿ ಪರಿಚಯಿಸಿಕೊಂಡಿದ್ದರು. ಬಾಡಿಗೆಗೆ ನೀಡಿರುವ ಬಗ್ಗೆ ಕರಾರುಪತ್ರ ಮಾಡಿಸಲು ಮುಂದಾದಾಗ ಮುಂದಿನ ತಿಂಗಳು ಮನೆ ಖಾಲಿ ಮಾಡುವುದಾಗಿ ತಿಳಿಸಿದ್ದರಿಂದ ಕರಾರು ಮಾಡಿಕೊಂಡಿರಲಿಲ್ಲ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಆ ಬಳಿಕ ನಟರಾಜ್ ಮನೆ ಬಳಿ ಬಂದಾಗೆಲ್ಲ ಬಾಗಿಲಿಗೆ ಬೀಗ ಹಾಕಿರುತ್ತಿತ್ತು. ಅಕ್ಕಪಕ್ಕದ ನಿವಾಸಿಗಳಿಗೆ ವಾಸನೆ ಬಂದಿದ್ದರಿಂದ ಅವರು ನಟರಾಜ್ ಅವರ ಮಗ ರವಿಕಿರಣ್‌ಗೆ ಕರೆ ಮಾಡಿ ತಿಳಿಸಿದ್ದರು. ಅವರು ಬಂದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.