
ಬೆಂಗಳೂರು: ಲೈಟ್ ಆನ್ ಮತ್ತು ಆಫ್ ವಿಚಾರಕ್ಕೆ ಮ್ಯಾನೇಜರ್ ಹಾಗೂ ನೌಕರನ ನಡುವೆ ನಡೆದ ಗಲಾಟೆಯು ಮ್ಯಾನೇಜರ್ ಕೊಲೆಯಲ್ಲಿ ಅಂತ್ಯವಾದ ಘಟನೆ ಗೋವಿಂದರಾಜನಗರದ ಸರಸ್ವತಿನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಡಾಟಾ ಡಿಜಿಟಲ್ ಕಂಪನಿಯ ವ್ಯವಸ್ಥಾಪಕ, ಚಿತ್ರದುರ್ಗದ ಭೀಮೇಶ್ ಬಾಬು (41) ಕೊಲೆಯಾದವರು.
ಕೃತ್ಯ ಎಸಗಿದ ಬಳಿಕ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಆರೋಪಿ, ಕಂಪನಿಯ ನೌಕರ ಸೋಮಲವಂಶಿ (24) ಎಂಬಾತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಮೂಲಗಳು ಹೇಳಿವೆ.
ಸರಸ್ವತಿ ನಗರದಲ್ಲಿ ಈ ಕಚೇರಿಯಿದೆ. ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಸಿನಿಮಾ, ಕಿರುಚಿತ್ರ, ಧಾರಾವಾಹಿಗಳ ವಿಡಿಯೊವನ್ನು ಈ ಕಂಪನಿಯಲ್ಲಿ ಎಡಿಟಿಂಗ್ ಮಾಡಿ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಕೊಡಲಾಗುತ್ತಿದೆ.
ಕಂಪನಿಯ ವ್ಯವಸ್ಥಾಪಕ ಭೀಮೇಶ್ ಅವರೊಂದಿಗೆ ಆರೋಪಿ ಸೋಮಲವಂಶಿ ಸೇರಿ ಐವರು ನೌಕರರು ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ನಾಲ್ವರು ನೌಕರರು ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಭೀಮೇಶ್ ಹಾಗೂ ಸೋಮಲವಂಶಿ ಇಬ್ಬರೇ ಇದ್ದರು. ಆ ಸಂದರ್ಭದಲ್ಲಿ ಆರೋಪಿ, ಲೈಟ್ ಆನ್ ಹಾಗೂ ಆಫ್ ಮಾಡುತ್ತಿದ್ದ. ಕೋಪಗೊಂಡ ಭೀಮೇಶ್ ಪ್ರಶ್ನೆ ಮಾಡಿದ್ದರು. ಬಳಿಕ ಕಚೇರಿ ಪಕ್ಕದಲ್ಲಿದ್ದ ಮನೆಗೆ ತೆರಳಿದ್ದರು. ಅವರನ್ನು ಹಿಂಬಾಲಿಸಿದ್ದ ಆರೋಪಿ, ವ್ಯವಸ್ಥಾಪಕರ ಕಣ್ಣಿಗೆ ಖಾರದಪುಡಿ ಎರಚಿ ಡಂಬಲ್ಸ್‌ನಿಂದ ತಲೆಗೆ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರು ನಾಯಂಡಹಳ್ಳಿಯಲ್ಲಿ ನೆಲಸಿದ್ದ ಸ್ನೇಹಿತನಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ನೇಹಿತ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಭೀಮೇಶ್ ಮೃತಪಟ್ಟಿದ್ದರು. ಆರೋಪಿ ಠಾಣೆಗೆ ತೆರಳಿ ಡಂಬಲ್ಸ್‌ನಿಂದ ಹೊಡೆದು ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.