ADVERTISEMENT

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಗೈರಾಗಲು ವೈ.ಕೆ. ಮುದ್ದುಕೃಷ್ಣ   ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 14:42 IST
Last Updated 17 ಡಿಸೆಂಬರ್ 2024, 14:42 IST
<div class="paragraphs"><p>ವೈ.ಕೆ. ಮುದ್ದುಕೃಷ್ಣ&nbsp;&nbsp;</p></div>

ವೈ.ಕೆ. ಮುದ್ದುಕೃಷ್ಣ  

   

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಗಮ ಸಂಗೀತ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಸಮ್ಮೇಳನದ ಗೋಷ್ಠಿಗೆ ಗೈರುಹಾಜರಾಗಲು ನಿರ್ಧರಿಸಿದ್ದಾರೆ. 

ಈ ಬಗ್ಗೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. ಸಮ್ಮೇಳನದ 9ನೇ ಗೋಷ್ಠಿ ‘ಸಂಕೀರ್ಣ ನೆಲೆಗಳು–2’ ಎಂಬ ವಿಷಯದ ಮೇಲೆ ನಡೆಯಲಿದ್ದು, ಇದರಲ್ಲಿ ‘ಪುನರುಜ್ಜೀವನಗೊಳ್ಳಬೇಕಾದ ಸುಗಮ ಸಂಗೀತ ಕ್ಷೇತ್ರ’ ಎಂಬ ವಿಷಯ ಮಂಡನೆಗೆ ವೈ.ಕೆ. ಮುದ್ದುಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ.

ADVERTISEMENT

‘ಸುಗಮ ಸಂಗೀತ ಪ್ರಕಾರವು ಸ್ವಯಂ ಪ್ರಕಾಶದಿಂದ ಬೆಳಗುವಷ್ಟು ಪುಷ್ಟವಾಗಿ ಬೆಳೆದಿದೆ. ಹಲವು ಕವಿಗಳು, ಕಲಾವಿದರನ್ನು ಬೆಳೆಸಿದೆ. ತನ್ನದೆ ಆದ ಶ್ರೋತೃ ಸಮೂಹವನ್ನೂ ಸಂಪಾದಿಸಿಕೊಂಡಿದೆ. ಹೀಗಿರುವಾಗ ಸಮ್ಮೇಳನದ ಗೋಷ್ಠಿಯಲ್ಲಿ ನಿಗದಿಪಡಿಸಿದ ವಿಷಯವೇ ಅಪ್ರಸ್ತುತ. 1993ರಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ಸಮ್ಮೇಳನಗಳಲ್ಲಿ ಪ್ರಾಮುಖ್ಯ ನೀಡುತ್ತಾ ಬರಲಾಗಿದೆ. ಆದರೆ, ಈ ಬಾರಿ ಪ್ರತ್ಯೇಕ ಗೋಷ್ಠಿಗೆ ಅವಕಾಶ ನೀಡದೆ ಕಡೆಗಣಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಕಾವ್ಯ ಮತ್ತು ಕಾವ್ಯಗಾಯನ ಸಾಹಿತ್ಯದ ಒಂದು ಅವಿಭಾಜ್ಯ ಅಂಗ ಎಂಬುದರ ಅರಿವು ಪರಿಷತ್ತಿಗೆ ಇರಬೇಕು. ನಿಗದಿಪಡಿಸಲಾದ ಗೋಷ್ಠಿಯಲ್ಲಿಯೂ ವಿಷಯ ಮಂಡನೆಗೆ ಕೇವಲ 10 ನಿಮಿಷಗಳ ಕಾಲಮಿತಿ ಒದಗಿಸಲಾಗಿದೆ. ಉಳಿದ ಗೋಷ್ಠಿಗಳಲ್ಲಿ 15ರಿಂದ 20 ನಿಮಿಷ ಗೊತ್ತುಪಡಿಸಲಾಗಿದೆ. ಸುಗಮ ಸಂಗೀತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹಾಗೂ ಗೋಷ್ಠಿಯಲ್ಲಿ ಭಾಗವಹಿಸಬಹುದಾದ ಸಂಪನ್ಮೂಲ ವ್ಯಕ್ತಿಗಳ ಹೆಸರನ್ನು ನಾನು ಹಿಂದೆ ಸೂಚಿಸಿದ್ದೆ. ಆದರೆ, ಪ್ರತ್ಯೇಕ ಗೋಷ್ಠಿಗೆ ಅವಕಾಶ ನೀಡದೆ ಕಡೆಗಣಿಸಲಾಗಿದೆ. ಪರಿಷತ್ತಿನ ದಿವ್ಯ ನಿರ್ಲಕ್ಷ್ಯದಿಂದ ನಾನು ಗೋಷ್ಠಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ’ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.