ADVERTISEMENT

ಮಾರುಕಟ್ಟೆಗೆ ಮಾವು ತಡ: ಉತ್ತಮ ಬೆಲೆ ನಿರೀಕ್ಷೆ

ಅವಧಿ ಮುಂದೂಡಿದ ಅಕಾಲಿಕ ಮಳೆ l ಇಳುವರಿ ಬಹುತೇಕ ಕಡಿಮೆ

ಮನೋಹರ್ ಎಂ.
Published 11 ಮಾರ್ಚ್ 2022, 20:26 IST
Last Updated 11 ಮಾರ್ಚ್ 2022, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಈ ವರ್ಷ ಮಾವು ಇಳುವರಿ ತಗ್ಗಲಿದೆ. ಇತ್ತೀಚಿನ ಹವಾಮಾನ ವೈಪರೀತ್ಯದಿಂದ ಮಾವು ಬೆಳೆ ಪ್ರಕ್ರಿಯೆ ನಿಧಾನವಾಗಿದ್ದು, ಮಾರುಕಟ್ಟೆಗಳಿಗೆ ಮಾವು ತಡವಾಗಿ ಬರಲಿದೆ.

ಕಳೆದ ವರ್ಷ ಸುರಿದ ಭಾರಿ ಮಳೆ ಮಾವು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಮಾವು ಸಾಮಾನ್ಯ ಅವಧಿಗಿಂತ ತುಸು ವಿಳಂಬವಾಗಿ ಮಾವು ಪ್ರಿಯರ ಕೈಸೇರಲಿದೆ. ಆದರೆ, ಇಳುವರಿ ತಗ್ಗುವುದರಿಂದ ಮಾವಿಗೆ ಉತ್ತಮ ಬೆಲೆ ಸಿಗಲಿದೆ ಎಂದೂ ನಿರೀಕ್ಷಿಸಲಾಗಿದೆ.

‘ಕಳೆದ ವರ್ಷ ಡಿಸೆಂಬರ್‌ವರೆಗೆ ಮಳೆ ಸುರಿಯಿತು.ಮಾವು ಬೆಳೆಯುವ ಪ್ರದೇಶಗಳೆಲ್ಲಮಳೆಯಿಂದ ತಿಂಗಳ
ಗಟ್ಟಲೆ ತೇವಾಂಶದಿಂದ ಕೂಡಿದ್ದವು. ಹೂಬಿಡಲು ಪೂರಕ ವಾತಾವರಣ ಸಿಕ್ಕರೂ ಹವಾಮಾನ ವೈಪರೀತ್ಯದಿಂದ ಹೂ ಬಿಡುವ ಸಮಯ ಹಾಗೂ ‘ಕಾಯಿ ಕಚ್ಚುವ ಪ್ರಕ್ರಿಯೆ’ಗಳು ವಿಳಂಬವಾಗಿವೆ. ಇದರಿಂದ ಈ ವರ್ಷದ ಮಾವು ಇಳುವರಿ ಬಹುತೇಕ ಕಡಿಮೆ. ಇದನ್ನು ‘ಮಾವಿನ ಇಳಿವರ್ಷ’ ಎನ್ನಬಹುದು’ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ (ಕೆಎಸ್‌ಎಂಡಿಎಂಸಿ) ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಾಮಾನ್ಯವಾಗಿ ಫೆಬ್ರುವರಿ ಮೊದಲ ವಾರದಲ್ಲಿ ಹೂಬಿಡುವ ಪ್ರಕ್ರಿಯೆ ಶುರುವಾಗಿ, ಏಪ್ರಿಲ್‌ ಎರಡನೇ ವಾರದಿಂದ ಜುಲೈವೆರೆಗೆ ಮಾವುಅವಧಿ ಇರುತ್ತದೆ. ಈ ಬಾರಿಬೆಳೆ ನಿಧಾನವಾಗಿರುವುದರಿಂದ ಮಾವು ಮಾರುಕಟ್ಟೆಗೆ ಬರುವ ಸಮಯವೂ ತಡವಾಗಲಿದೆ. ರಾಜ್ಯದಲ್ಲಿ ಶೇ 60ರಷ್ಟು ಇಳುವರಿ ನಿರೀಕ್ಷಿಸಲಾಗಿದೆ.ಇಳುವರಿ ಕಡಿಮೆಯಾಗುವುದರಿಂದ ಬೆಳೆಗಾರರಿಗೆ ಉತ್ತಮ ದರ ಸಿಗುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

‘2018ರಲ್ಲಿ ಮಾವು ಇಳುವರಿ ಭಾರಿ ಏರಿಕೆ ಕಂಡಿತ್ತು. ಅದಕ್ಕೆತದ್ವಿರುದ್ಧವಾಗಿ ಈ ವರ್ಷ ಇಳುವರಿ ಕುಸಿಯಲಿದೆ. ಒಟ್ಟು ಇಳುವರಿಯಲ್ಲಿ ಶೇ 40ರಷ್ಟು ಮಾವು ಮಾತ್ರ ರಾಜ್ಯದಲ್ಲಿ ಮಾರಾಟ ಆಗುತ್ತದೆ. ಉಳಿದ ಮಾವನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಶೇ 5ರಷ್ಟು ಮಾವು ಪಾನೀಯ ತಯಾರಿಗೆ ಬಳಕೆಯಾಗುತ್ತದೆ’ ಎಂದು ಅವರು ಹೇಳಿದರು.

ಜಿಲ್ಲಾವಾರು ಮಾವು ಮೇಳ: ‘ಕೋವಿಡ್‌ನಿಂದಾಗಿ ಕಳೆದ ವರ್ಷ ಮಾವು ಮೇಳ ನಡೆಯಲಿಲ್ಲ.ಈ ವರ್ಷ ಮೇಳ ಆಯೋಜನೆಗೆ ಎಲ್ಲ ತಯಾರಿ ನಡೆಸುತ್ತಿದ್ದೇವೆ.ಬೆಂಗಳೂರು ಸೇರಿದಂತೆ ಜಿಲ್ಲಾವಾರು ಮಾವು ಮೇಳ ಆಯೋಜಿಸಲಿದ್ದೇವೆ’ ಎಂದರು.

ಬೆಂಗಳೂರಿನಲ್ಲೇ 45 ಸಾವಿರ ಗ್ರಾಹಕರು

‘ಮನೆಬಾಗಿಲಿಗೆ ಮಾವು ತಲುಪಿಸಲು ನಿಗಮ ಆರಂಭಿಸಿದ ಆನ್‌ಲೈನ್‌ ಸೇವೆ ಬೆಂಗಳೂರಿನಾದ್ಯಂತ ಯಶಸ್ವಿ ಕಂಡಿದೆ. ಎರಡೇ ವರ್ಷಗಳಲ್ಲಿ ಬೆಂಗಳೂರಿನ ಗ್ರಾಹಕರ ಸಂಖ್ಯೆ 45 ಸಾವಿರಗಳಿಗೆ ಏರಿದೆ. ನಿಗಮದ ಪೋರ್ಟಲ್‌ಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಲಾಗಿನ್‌ ಆಗಿದ್ದಾರೆ’ ಎಂದು ನಾಗರಾಜ್ ಹೇಳಿದರು.

‘ಆನ್‌ಲೈನ್‌ ಸೇವೆಯ ಮೂಲಕ ನಿಗಮವು 75 ಟನ್ ಮಾವು ಮಾರಾಟ ಮಾಡಿದೆ. ಅಂಚೆ ಇಲಾಖೆ ಸಹಯೋಗದಲ್ಲಿ ಮಾವು ಖರೀದಿಸುವ ವ್ಯವಸ್ಥೆ ಈ ಬಾರಿಯೂ ಇರಲಿದೆ. ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ರೈತರಿಂದ ನೇರವಾಗಿ ಮಾವು ತಲುಪಿಸಲು ಬೆಂಗಳೂರು ಅಪಾರ್ಟ್‍ಮೆಂಟ್ಸ್ ಸಮುಚ್ಚಯಗಳ ಒಕ್ಕೂಟವು (ಬಿಎಎಫ್) ನಿಗಮದ ಜತೆಗೂಡಿ ಸೇವೆ ನೀಡಲಿದೆ’ ಎಂದರು.

‘ಇಮಾಮ್‌ ಪಸಂದ್’ ದುಬಾರಿ ಮಾವು

‘ಮಾವಿನ ವಿವಿಧ ತಳಿಗಳ ಪೈಕಿ ‘ಇಮಾಮ್‌ ಪಸಂದ್‌’ ತಳಿ ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ತಳಿ ಹಳೆಯದಾದರೂ ಅತ್ಯುತ್ತಮ ಸಿಹಿರುಚಿ, ಸುವಾಸನೆ ಮತ್ತು ರಸಭರಿತ ಗುಣಗಳನ್ನು ಹೊಂದಿರುವುದಿಂದ ಬೇಡಿಕೆ ಸೃಷ್ಟಿಸಿದ್ದು, ಪ‍್ರತಿ ಕೆ.ಜಿ.ಗೆ ಗರಿಷ್ಠ ₹450ರಿಂದ ₹700ರವರೆಗೆ ಮಾರಾಟವಾಗುತ್ತದೆ’ ಎಂದು
ಸಿ.ಜಿ.ನಾಗರಾಜ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.