ADVERTISEMENT

ಮಣಿಪಾಲ್ ಆಸ್ಪತ್ರೆ: ಮೂತ್ರಪಿಂಡ ಕಸಿ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 21:18 IST
Last Updated 12 ಜೂನ್ 2020, 21:18 IST

ಬೆಂಗಳೂರು: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 43 ವರ್ಷದ ವ್ಯಕ್ತಿಗೆ ನಗರದ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಕೋಲ್ಕತ್ತದ ರೋಗಿಗೆ ಮೂತ್ರಪಿಂಡದ ಶೀಘ್ರ ಕಸಿ ಮಾಡುವ ಅಗತ್ಯವಿತ್ತು. ರಕ್ತದ ಕೊರತೆ ಉಂಟಾದಾಗ ಆಸ್ಪತ್ರೆಯ ವೈದ್ಯರೇ ಮುಂದೆ ಬಂದು ರಕ್ತದಾನ ಮಾಡಿದರು.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿ ಮೂತ್ರಪಿಂಡ ತಜ್ಞ ಡಾ.ರವಿ ಜಂಗಮಣಿ, ಡಾ.ದೀಪಕ್ ದುಬೆ, ಡಾ.ಶಿವಶಂಕರ್, ಡಾ.ಸೋಮಣ್ಣ, ಸಿಟಿವಿಎಸ್ ಶಸ್ತ್ರಕ್ರಿಯಾ ತಜ್ಞ ಡಾ.ದೇವಾನಂದ, ಅರಿವಳಿಕೆ ತಜ್ಞ ಡಾ.ನವನೀತನ್ ಇದ್ದರು.

ADVERTISEMENT

‘ರೋಗಿಯ ರಕ್ತನಾಳಗಳು ರೋಗಗ್ರಸ್ತವಾಗಿ, ಕೃತಕ ಕಸಿ ಅನಿವಾರ್ಯವಾಗಿತ್ತು. ಜೊತೆಗೆ ಅವರ ರಕ್ತನಾಳಗಳು ಹಾಳಾಗಿದ್ದು, ದೇಹದ ಕೆಳಭಾಗಕ್ಕೆ ರಕ್ತ ಪೂರೈಕೆ ಕಳಪೆ ಮಟ್ಟದಲ್ಲಿತ್ತು. ಇದರಿಂದ ಮೂತ್ರಪಿಂಡ ಕಸಿ ಕಷ್ಟಕರವಾಗಿತ್ತು. ವಾರಕ್ಕೆ ನಾಲ್ಕು ಬಾರಿ ಡಯಾಲಿಸಿಸ್ ಮಾಡಬೇಕಾಯಿತು’ ಎಂದು ಡಾ.ದೀಪಕ್ ದುಬೆ ತಿಳಿಸಿದರು.

ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ‘ಎರಡು ಹಂತಗಳಲ್ಲಿ ಕಸಿ ಪ್ರಕ್ರಿಯೆ ನಡೆಯಿತು. ಮೊದಲ ಹಂತದಲ್ಲಿ ಬದಲಿ ಮೂತ್ರಪಿಂಡ ಅಳವಡಿಸಲು ಸ್ಥಳಾವಕಾಶ ಕಲ್ಪಿಸಲಾಯಿತು. ನಂತರ ಕೆಟ್ಟಿದ್ದ ಅವರ ರಕ್ತನಾಳ ಸರಿಪಡಿಸಿ, ಮೂತ್ರಪಿಂಡ ಕಸಿ ನಡೆಸಿದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.