ADVERTISEMENT

‘ಮಣ್ಣಿನ ಕನಸು’ ಕೃತಿ ಲೋಕಾರ್ಪಣೆ; ಶತಾವಧಾನಿ ಗಣೇಶ್‌ ಅವರ ಚೊಚ್ಚಲ ಕಾದಂಬರಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:22 IST
Last Updated 18 ಮಾರ್ಚ್ 2022, 21:22 IST
ಸಾಹಿತ್ಯ ಪ್ರಕಾಶನ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಆಯೋಜಿಸಿದ ಶತಾವಧಾನಿ ಆರ್. ಗಣೇಶ್ ಅವರ 'ಮಣ್ಣಿನ ಕನಸು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎ.ಆರ್. ರಾಮಸ್ವಾಮಿ ಅವರು ಪುಸ್ತಕ ಬಿಡುಗಡೆ ಮಾಡಿದರು. ವಾಸುಕಿ, ಶಶಿಕಿರಣ್, ಎಸ್.ಆರ್. ರಾಮಸ್ವಾಮಿ ಹಾಗೂ ಇತರರು ಇದ್ದರು.       -- ಪ್ರಜಾವಾಣಿ ಚಿತ್ರ
ಸಾಹಿತ್ಯ ಪ್ರಕಾಶನ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಆಯೋಜಿಸಿದ ಶತಾವಧಾನಿ ಆರ್. ಗಣೇಶ್ ಅವರ 'ಮಣ್ಣಿನ ಕನಸು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎ.ಆರ್. ರಾಮಸ್ವಾಮಿ ಅವರು ಪುಸ್ತಕ ಬಿಡುಗಡೆ ಮಾಡಿದರು. ವಾಸುಕಿ, ಶಶಿಕಿರಣ್, ಎಸ್.ಆರ್. ರಾಮಸ್ವಾಮಿ ಹಾಗೂ ಇತರರು ಇದ್ದರು.       -- ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾವಿರದ ಐನೂರು ವರ್ಷಗಳಿಗೂ ಹಳೆಯ ಕಾಲಘಟ್ಟದ ಕಥಾಹಂದರವೊಂದನ್ನು ಕಾದಂಬರಿಯ ರೂಪದಲ್ಲಿ ಹಿಡಿದಿಟ್ಟಿರುವ ಶತಾವಧಾನಿ ಡಾ.ಆರ್.ಗಣೇಶ್‌ ಅವರ ಮೊದಲ ಕಾದಂಬರಿ ‘ಮಣ್ಣಿನ ಕನಸು‘ ಶುಕ್ರವಾರ ಲೋಕಾರ್ಪಣೆಗೊಂಡಿತು.

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಕಾದಂಬರಿ ಲೋಕಾರ್ಪಣೆಗೊಳಿಸಿ, ‘ಭಾಸನ ಸ್ವಪ್ನ ವಾಸವದತ್ತಾ ಹಾಗೂ ಶೂದ್ರಕನ ಮೃಚ್ಛಕಟಿಕಂ ನಾಟಕಗಳ ಪಾತ್ರಗಳನ್ನು ಮೇಳೈಸಿದ ಈ ಕಾದಂಬರಿ ಗಣೇಶ್‌ ಅವರ ಸೃಜನಶೀಲತೆಗೆ ಮತ್ತೊಂದು ಮೈಲಿಗಲ್ಲು’ ಎಂದು ಬಣ್ಣಿಸಿದರು.

‘ಅಂದಿನ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಸಾಕಷ್ಟು ವಿವರಗಳು ಈ ಕೃತಿಯಲ್ಲಿವೆ. ಇದರ ಕಥೆ ಮತ್ತು ಪಾತ್ರಗಳು ಸಾಹಿತ್ಯ ರಸಾನುಭೂತಿಯಲ್ಲಿ ಮಿಂದೆದ್ದಿವೆ. ಈ ಐತಿಹಾಸಿಕ ಕಾದಂಬರಿಯುದ್ದಕ್ಕೂ; ರಾಜಕೀಯ ತಂತ್ರ–ಪ್ರತಿತಂತ್ರಗಳ , ಕಲೆ–ತತ್ವಗಳ ಬಣ್ಣಗಳನ್ನು ಒಳಗೊಂಡ ಚಿತ್ರಣಗಳಿವೆ. ಓದುಗರ ಮನಸ್ಸನ್ನು ಕಾಡುವ ದಟ್ಟವಾದ ಪಾತ್ರಗಳನ್ನು ಆಪ್ತವಾಗಿ ಹೆಣೆಯಲಾಗಿದೆ’ ಎಂದರು.

ADVERTISEMENT

ಕಾದಂಬರಿಯ ಕುರಿತು ಮಾತನಾಡಿದ ಲೇಖಕ ಮತ್ತು ಸಾಫ್ಟ್‌ವೇರ್‌ ತಂತ್ರಜ್ಞ ಎಚ್‌.ಎ.ವಾಸುಕಿ, ‘ಕಾದಂಬರಿಯ ಮಾಧ್ಯಮದಲ್ಲೂ ತಮ್ಮ ಸಾಹಿತ್ಯ ಕೃಷಿಯ ವಿಸ್ತರಣೆ ಮಾಡಿರುವ ಶತಾವಧಾನಿ ಗಣೇಶ್‌ ಎಲ್ಲ ಪಾತ್ರ, ಸನ್ನಿವೇಶ ಹಾಗೂ ಘಟನೆಗಳನ್ನು ರಮಣೀಯವಾಗಿ ಮತ್ತು ಆಕರ್ಷಣೀಯವಾಗಿ ಹಿಡಿದಿಟ್ಟಿದ್ದಾರೆ’ ಎಂದರು.ಬಿ.ಎನ್. ಶಶಿಕಿರಣ್, ಅವರೂ ಕಾದಂಬರಿಯ ಕುರಿತು ವಿವರಿಸಿದರು.

ಕಾದಂಬರಿಯ ಮೊದಲ ಗೌರವ ಕೃತಿಯನ್ನು ಶತಾವಧಾನಿ ಗಣೇಶ್‌ ಅವರು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ನೀಡಿದರು. ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿವಿಜಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಕಿಕ್ಕಿರಿದು ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.