ADVERTISEMENT

ಏರೋ ಇಂಡಿಯಾದಲ್ಲಿ ‘ಮಂಥನ್‌’

ನವೋದ್ಯಮ, ಎಂಎಸ್‌ಎಂಇ ಉದ್ದಿಮೆದಾರರು, ಶೈಕ್ಷಣಿಕ ತಜ್ಞರು, ಹೂಡಿಕೆದಾರರಿಗೆ ವೇದಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 0:03 IST
Last Updated 4 ಫೆಬ್ರುವರಿ 2023, 0:03 IST
ಏರೋ ಇಂಡಿಯಾ
ಏರೋ ಇಂಡಿಯಾ   

ಬೆಂಗಳೂರು: ಈ ಬಾರಿಯ ಏರೋ ಇಂಡಿಯಾದಲ್ಲಿ ರಕ್ಷಣಾ ಮತ್ತು ವೈಮಾಂತರಿಕ್ಷ ಕ್ಷೇತ್ರದ ನವೋದ್ಯಮ ಮತ್ತು ಎಂಎಸ್‌ಎಂಇ ಉದ್ದಿಮೆದಾರರು, ಶೈಕ್ಷಣಿಕ ತಜ್ಞರು ಹಾಗೂ ಹೂಡಿಕೆದಾರರನ್ನು ಒಂದೇ ಸೂರಿನ ಅಡಿಯಲ್ಲಿ ತರಲು ‘ಮಂಥನ್‌–2023’ ವೇದಿಕೆ ಅವಕಾಶ ಒದಗಿಸಲಿದೆ.

ಮಹತ್ವದ ತಂತ್ರಜ್ಞಾನ ಪ್ರದರ್ಶನಕ್ಕೂ ‘ಮಂಥನ್‌’ ವೇದಿಕೆ ಕಲ್ಪಿಸಲಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ‘ಮಂಥನ್‌’ ಕಾರ್ಯಕ್ರಮದಲ್ಲಿ ಸೈಬರ್ ಭದ್ರತೆ ಕುರಿತ ‘ಡಿಫೆನ್ಸ್ ಇಂಡಿಯಾ’ ನವೋದ್ಯಮಕ್ಕೆ ಚಾಲನೆ ನೀಡಲಿದ್ದಾರೆ.

ಫೆ.15ರಂದು ನಡೆಯಲಿರುವ ‘ಮಂಥನ್’ ಅನ್ನು ‘ಐಡಿಇಎಕ್ಸ್‌’ ಆಯೋಜಿಸುತ್ತಿದೆ. ‘ಐಡಿಇಎಕ್ಸ್‌’ (ರಕ್ಷಣಾ ಶ್ರೇಷ್ಠತೆಗಾಗಿ ಆವಿಷ್ಕಾರಗಳು) ರಕ್ಷಣಾ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದಕ್ಕೆ ಪ್ರಧಾನಿ 2018ರಲ್ಲಿ ಚಾಲನೆ ನೀಡಿದ್ದರು. ನವೋದ್ಯಮಗಳು, ಎಂಎಸ್ಎಂಇಗಳು, ಇನ್‌ಕ್ಯುಬೇಟರ್‌ಗಳನ್ನು ತೊಡಗಿಸಿಕೊಳ್ಳುವ ಮೂಲಕ ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸಲು ಪೂರಕ ವ್ಯವಸ್ಥೆ ಸೃಷ್ಟಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

‘ಮಂಥನ್’ ಹಲವು ಪ್ರಥಮಗಳನ್ನು ಹೊಂದಿದೆ. ಸೈಬರ್ ಭದ್ರತೆಯ ಕುರಿತ ಸ್ಪರ್ಧೆಗಳಿಗೆ ಚಾಲನೆ ನೀಡುವುದು ಸೇರಿದಂತೆ ಐಡಿಇಎಕ್ಸ್‌ ಹೂಡಿಕೆದಾರರ ತಾಣ ಸ್ಥಾಪನೆ, ಹೂಡಿಕೆದಾರರೊಂದಿಗಿನ ಒಡಂಬಡಿಕೆಗಳು ಒಳಗೊಂಡಿವೆ.

ಇದುವರೆಗೆ ಐಡಿಇಎಕ್ಸ್‌ ಎಂಟು ಸುತ್ತುಗಳ ‘ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜ್‌’ (ಡಿಐಎಸ್‌ಸಿ) ಮತ್ತು ಆರು ಸುತ್ತುಗಳ ‘ಓಪನ್ ಚಾಲೆಂಜ್’ಗಳನ್ನು ಆರಂಭಿಸಿದೆ. ಜತೆಗೆ, ಆವಿಷ್ಕಾರ ಮಾಡಿದವರಿಂದ 6,850ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಸದ್ಯ, ಐಡಿಇಎಕ್ಸ್‌ 90ಕ್ಕೂ ಹೆಚ್ಚು ನವೋದ್ಯಮಗಳು ಮತ್ತು ಎಂಎಸ್ ಎಂಇಗಳೊಂದಿಗೆ ಒಪ್ಪಂದ ಸಹ ಮಾಡಿಕೊಂಡಿದೆ. ಸಶಸ್ತ್ರ ಪಡೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ ಧನಸಹಾಯ ಮತ್ತು ಮಾರ್ಗದರ್ಶನ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.