ADVERTISEMENT

‘ಭಾರತದ ಬಹುತ್ವ ಅಪಾಯದಲ್ಲಿದೆ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 18:20 IST
Last Updated 9 ಮಾರ್ಚ್ 2019, 18:20 IST
ಕಾರ್ಯಕ್ರಮದಲ್ಲಿ ಪಿ.ಚಿದಂಬರಂ ಅವರು ಫೋಟೊಗೆ ಪೋಸು ನೀಡಿದ್ದು ಹೀಗೆ... –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಪಿ.ಚಿದಂಬರಂ ಅವರು ಫೋಟೊಗೆ ಪೋಸು ನೀಡಿದ್ದು ಹೀಗೆ... –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಕೆನಡಾದಂತಹ ದೇಶಗಳು ಬಹು ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿರುವಾಗ, ಬಹುತ್ವಕ್ಕೆ ಹೆಸರಾದ ಭಾರತ ಅಪಾಯದ ದಿನಗಳನ್ನು ಎದುರಿಸುತ್ತಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಆತಂಕ ವ್ಯಕ್ತಪಡಿಸಿದರು.

ಪಿ.ಚಿದಂಬರಂ ಅವರ ಲೇಖನಗಳ ಸಂಗ್ರಹ, ‘ಸೇವಿಂಗ್‌ ದಿ ಐಡಿಯಾ ಆಫ್‌ ಇಂಡಿಯಾ’ ‍ಪುಸ್ತಕ ಬಿಡುಗಡೆ ಸಮಾರಂಭವು ‘ಮಂಥನ್@ಬೆಂಗಳೂರು’ ಮತ್ತು ಸೇಂಟ್‌ ಜೋಸೆಫ್‌ ಕಾಲೇಜು ಸಹಯೋಗದಲ್ಲಿ ಶನಿವಾರ ನಡೆಯಿತು. ಈ ವೇಳೆ ಮಾತನಾಡಿದ ಅವರು, ‘ದೇಶದಲ್ಲಿ ಎನ್‌ಕೌಂಟರ್‌ ಎಂಬುದು ಅಧಿಕೃತ ನೀತಿಯಾಗಿ ರೂಪಿತಗೊಳ್ಳುತ್ತಿದೆ. ಶಾಂತಿಭಂಗದ ಹೆಸರಿನಲ್ಲಿ ಯಾರನ್ನಾದರೂ ಕೊಲ್ಲಬಹುದಾದರೆ ಅದು ನಾಗರಿಕ ಸಮಾಜದ ಲಕ್ಷಣ ಎನಿಸುವುದಿಲ್ಲ. ಈ ದೇಶಕ್ಕೆ ಏನಾಗುತ್ತಿದೆ ಎಂಬುದನ್ನು ಯುವಜನರು ಅರಿಯಬೇಕಿದೆ’ ಎಂದರು.

‘ವೈಚಾರಿಕ, ಪ್ರಗತಿಪರ ಮತ್ತು ಕ್ರಾಂತಿಕಾರಕ ಮನೋಭಾವ ಹೊಂದಿದವರಿಗೆ ರಾಷ್ಟ್ರ ವಿರೋಧಿ ಹಣೆಪಟ್ಟಿ ಕಟ್ಟಲಾಗುತ್ತಿದೆ. ರಾಷ್ಟ್ರ ವಿರೋಧಿ ಎಂಬುದೇ ಬೋಗಸ್‌’ ಎಂದರು.

ADVERTISEMENT

‘ಮುಸ್ಲಿಂ, ಕ್ರಿಶ್ಚಿಯನ್‌ ಮತ್ತು ದಲಿತರ ಮತಗಳು ಬೇಡ. ಕೇವಲ ಹಿಂದೂಗಳ ಮತ ಬ್ಯಾಂಕ್‌ನಿಂದಲೇ ಗೆಲ್ಲುತ್ತೇವೆ ಎಂಬ ನಂಬಿಕೆಯನ್ನು ಬಿಜೆಪಿ ಹೊಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶ, ಗುಜರಾತ್‌ ಮತ್ತು ಮಧ್ಯ
ಪ್ರದೇಶಗಳಲ್ಲಿ ಎಷ್ಟು ಮುಸ್ಲಿಮರಿಗೆ ಟಿಕೆಟ್‌ ಕೊಡುತ್ತಾರೆ ಕಾದು ನೋಡೋಣ’ ಎಂದರು.

ರಾಹುಲ್‌ ಹಿಂದೂ: ‘ಕಾಂಗ್ರೆಸ್‌ ಯಾವತ್ತೂ ಹಿಂದೂ ವಿರೋಧಿ ಅಲ್ಲ. ರಾಹುಲ್‌ ಗಾಂಧಿ ಹಿಂದೂ. ಆದರೆ, ಅವರು ಜಾತ್ಯತೀತರು. ನೆಹರೂ ನಿರೀಶ್ವರವಾದಿಯಾಗಿದ್ದರು. ಇಂದಿರಾ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಆದರೆ, ಸೋನಿಯಾ ಗಾಂಧಿ ಒಂದೆರಡು ಬಾರಿ ಮಾತ್ರವೇ ಆರಾಧನಾ ಸ್ಥಳಕ್ಕೆ ಹೋಗಿರಬಹುದಷ್ಟೇ’ ಎಂದು ಅವರು ಹೇಳಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಆಧಾರ್‌ ಕಾರ್ಡ್‌ ಅನ್ನು ಸಬ್ಸಿಡಿ, ಲಾಭ ಮತ್ತು ಸೇವೆಯ ಭಾಗವಾಗಿ ಮಾತ್ರವೇ ಸೀಮಿತಗೊಳಿಸುತ್ತೇವೆ’ ಎಂದರು.

ರಾಜ್ಯಸಭೆ ಸದಸ್ಯ ಎಂ.ಬಿ. ರಾಜೀವ್‌ ಗೌಡ, ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಪಾಲ್ಗೊಂಡಿದ್ದರು.

ಬೃಹತ್‌ ಬ್ಯಾಂಕುಗಳು ಬೇಕು’

‘ಸಾರ್ವಜನಿಕ ವಲಯದ 24–26 ಬ್ಯಾಂಕುಗಳ ಇರುವ ಬದಲಿಗೆ ಬೃಹತ್‌ ಬ್ಯಾಂಕುಗಳು ದೇಶದ ಆರ್ಥಿಕ ಸಬಲತೆಯ ದೃಷ್ಟಿಯಿಂದ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಚಿದಂಬರಂ ಹೇಳಿದರು.

‘ದೇಶದ ಆರ್ಥಿಕ ವ್ಯವಸ್ಥೆ ಅಪಾಯದಲ್ಲಿದೆ’ ಎಂದ ಅವರು, ‘ಅಂಕಿ ಸಂಖ್ಯೆಗಳ ಆಧಾರದಲ್ಲಿ ಪ್ರಗತಿಯ ವಿವರ ಹೇಳಿದರೆ ಅದನ್ನು ನಂಬಲು ಕಷ್ಟ. ಅಂತಹ ಸಂಗತಿಗಳನ್ನು ನಿಖರತೆಯ ಒರೆಗೆ ಹಚ್ಚಿ ನೋಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.