ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ (ಮಂತ್ರಿ ಸ್ಕ್ವೇರ್) ಆಸ್ತಿ ತೆರಿಗೆ ಪಾವತಿಸದ ಕಾರಣ ಬಿಬಿಎಂಪಿ ಅಧಿಕಾರಿಗಳು ಈ ವರ್ಷದಲ್ಲಿ ಎರಡನೇ ಬಾರಿಗೆ ಬೀಗ ಹಾಕಿದ್ದಾರೆ. ವ್ಯಾಪಾರ ಪರವಾನಗಿಯನ್ನೂ ಅಮಾನತುಗೊಳಿಸಿದ್ದಾರೆ.
ಇದೇ ವರ್ಷ ಮಾರ್ಚ್ 16ರಂದು ಬೀಗ ಹಾಕಲಾಗಿತ್ತು. ಇದೀಗ ಮೇ 10ರಂದು ಬೀಗಹಾಕಿ, ಸೀಲ್ ಮಾಡಲಾಗಿದೆ. ಸುಮಾರು ₹30 ಕೋಟಿ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023ರ ಡಿಸೆಂಬರ್ 6ರಂದು ಬಿಬಿಎಂಪಿ ಹೊರಡಿಸಿರುವ ಸುತ್ತೋಲೆಯಂತೆ ವ್ಯಾಪಾರದ ಪರವಾನಗಿ ಅಮಾನತುಗೊಳಿಸಲಾಗಿದೆ ಮತ್ತು ಆಸ್ತಿ ತೆರಿಗೆ ಬಾಕಿ ಪಾವತಿಸದ ಕಾರಣಕ್ಕೆ ಆಸ್ತಿಯನ್ನು ಸೀಲ್ ಮಾಡಲಾಗಿದೆ ಎಂಬ ಫಲಕವನ್ನು ಮಂತ್ರಿ ಸ್ಕ್ವೇರ್‌ನ ಪ್ರಮುಖ ಪ್ರವೇಶ ದ್ವಾರ ಸೇರಿದಂತೆ ಹಲವೆಡೆ ಬಿಬಿಎಂಪಿ ಲಗತ್ತಿಸಿದೆ. ಮುಖ್ಯದ್ವಾರಕ್ಕೆ ಬೀಗ ಹಾಕಿ ಸೀಲ್ ಮಾಡಿದೆ.
‘ಕಳೆದ ಬಾರಿ ಬೀಗ ಹಾಕಿದ್ದಾಗ ಮಂತ್ರಿ ಸ್ಕ್ವೇರ್‌ನವರು ನ್ಯಾಯಾಲಯದಿಂದ ಆದೇಶ ತಂದು ತೆರವು ಮಾಡಿಸಿಕೊಂಡಿದ್ದರು. ನಂತರ ಸುಮಾರು ₹5 ಕೋಟಿಯಷ್ಟು ಮಾತ್ರ ಆಸ್ತಿ ತೆರಿಗೆ ಪಾವತಿಸಿ, ಉಳಿದ ಪಾವತಿಗೆ ಕಾಲಾವಕಾಶ ಕೇಳಿದ್ದರು. ನಂತರ ಯಾವುದೇ ರೀತಿಯ ಪಾವತಿ ಮಾಡಿರಲಿಲ್ಲ. ಮೇನಲ್ಲಿ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿತ್ತು. ಅವರಿಂದ ಉತ್ತರ ಬಂದಿಲ್ಲ. ಹೀಗಾಗಿ, ಶುಕ್ರವಾರ ಬೀಗ ಹಾಕಲಾಗಿದೆ. ಬಿಬಿಎಂಪಿಯ ಮಾರ್ಷಲ್‌ಗಳು ಸ್ಥಳದಲ್ಲಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
‘ಮಂತ್ರಿ ಮಾಲ್ 2020–21ನೇ ಸಾಲಿನಿಂದ ಆಸ್ತಿ ತೆರಿಗೆ ಪಾವತಿಸಿಲ್ಲ. 2009–10ನೇ ಸಾಲಿನಿಂದ 2019–20ನೇ ಸಾಲಿನವರೆಗೆ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಡಿ ಘೋಷಿಸಿಕೊಂಡಿರುವ ಮೊತ್ತವೂ ತಪ್ಪಾಗಿದೆ. ಬಾಕಿ ಮೊತ್ತ ₹27.75 ಕೋಟಿ ಹಾಗೂ ವ್ಯತ್ಯಾಸದ ಮೊತ್ತ ₹4.87 ಕೋಟಿ ಪಾವತಿಸಲು ನೋಟಿಸ್ ಜಾರಿ ಮಾಡಲಾಗಿದೆ. 2024ರ ಮೇ 3ರಂದು ಮಂತ್ರಿ ಮಾಲ್ ಮಾಲೀಕರು ₹1.5 ಕೋಟಿ ಮೊತ್ತದ ಡಿಡಿ ಪಾವತಿಸಿದ್ದಾರೆ. 2020ರಂತೆ ಬಡ್ಡಿ ಹಾಗೂ ದಂಡವನ್ನು ಪಾವತಿಸಬೇಕಿದ್ದು, ಫೆಬ್ರುವರಿಯಲ್ಲಿ ಅದನ್ನೂ ಮನ್ನಾ ಮಾಡಿ ಸರ್ಕಾರ ಆದೇಶಿಸಿದೆ. ಇಷ್ಟಾದರೂ ಬಾಕಿ ಪಾವತಿ ಮಾಡಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.