ADVERTISEMENT

ಬೂಕರ್ ಪ್ರಶಸ್ತಿ ವಿಜೇತರಿಗೆ ತಲಾ ₹ 10 ಲಕ್ಷ ಬಹುಮಾನ ನೀಡಿ: ಮನು ಬಳಿಗಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:39 IST
Last Updated 23 ಮೇ 2025, 15:39 IST
ಮನು ಬಳಿಗಾರ್‌
ಮನು ಬಳಿಗಾರ್‌   

ಬೆಂಗಳೂರು: ‘ಪ್ರತಿಷ್ಠಿತ ‘ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ’ಗೆ ಭಾಜನರಾದ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರಿಗೆ ರಾಜ್ಯ ಸರ್ಕಾರವು ತಲಾ ₹ 10 ಲಕ್ಷ ನಗದು ಬಹುಮಾನ ಘೋಷಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

‘ಪ್ರಶಸ್ತಿಯ ನಗದಿಗೂ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿ ಶೇಕಡ 30ರಷ್ಟು ತೆರಿಗೆ ವಿಧಿಸಿದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ನಗದು ಬಹುಮಾನ ಪಡೆಯಲು ಸಾಧ್ಯವಿಲ್ಲ. ತೆರಿಗೆ ರಹಿತ ನೀಡಲು ನಮ್ಮ ಕಾನೂನಿನಡಿ ಅವಕಾಶವಿಲ್ಲ. ಹಾಗಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತಕ್ಕೆ ಕೀರ್ತಿ ತಂದಿರುವ ಇಬ್ಬರಿಗೂ ರಾಜ್ಯ ಸರ್ಕಾರದಿಂದ ಗೌರವಧನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಈ ಹಿಂದೆ ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಅವರಿಗೆ ₹ 5 ಲಕ್ಷ ಗೌರವಧನ ನೀಡಿತ್ತು. ಅದೇ ರೀತಿ, ಎಸ್.ಎಲ್. ಭೈರಪ್ಪ ಅವರಿಗೆ ‘ಸರಸ್ವತಿ ಸಮ್ಮಾನ್ ಪ್ರಶಸ್ತಿ’ ಬಂದಾಗ ₹ 5 ಲಕ್ಷ ನೀಡಿ ಗೌರವಿಸಲಾಗಿತ್ತು. ಆದರೆ, ಅವರು ಆ ಹಣವನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಬಳಸುವಂತೆ ಸರ್ಕಾರಕ್ಕೆ ಹಿಂತಿರುಗಿಸಿದ್ದರು’ ಎಂದು ಸ್ಮರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.