ADVERTISEMENT

ಮಲದ ಗುಂಡಿಗೆ ಇಳಿಯುವುದು ನಿಲ್ಲಬೇಕು: ದು. ಸರಸ್ವತಿ ಅಭಿಮತ

‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ದು. ಸರಸ್ವತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 15:56 IST
Last Updated 21 ಫೆಬ್ರುವರಿ 2026, 15:56 IST
‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ದು. ಸರಸ್ವತಿ ಮಾತನಾಡಿದರು
ಪ್ರಜಾವಾಣಿ ಚಿತ್ರ
‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ದು. ಸರಸ್ವತಿ ಮಾತನಾಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಏಳೆಂಟು ವರ್ಷಗಳಲ್ಲಿ ಸ್ವಚ್ಛತೆಗಾಗಿ ಮಲದ ಗುಂಡಿಗೆ ಇಳಿದವರಲ್ಲಿ ನೂರಕ್ಕೂ ಅಧಿಕ ಕಾರ್ಮಿಕರು ಮೃತಪಟ್ಟಿದ್ದಾರೆ. ಸರ್ಕಾರ ಈ ಕಡೆಗೆ ಗಮನ ಹರಿಸಬೇಕು. ಮಲದ ಗುಂಡಿಗೆ ಇಳಿಯುವುದು ಕಟ್ಟುನಿಟ್ಟಾಗಿ ಕೊನೆಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ, ರಂಗಭೂಮಿ ಕಲಾವಿದೆ ದು. ಸರಸ್ವತಿ ಹೇಳಿದರು.

ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯ ಅತಿಥಿಯಾಗಿ ಮಾತನಾಡಿದರು.

‘ಮಲದ ಗುಂಡಿಗೆ ಇಳಿಯುವುದು ನಿಷೇಧ ಎಂದು ಕಡತದಲ್ಲಷ್ಟೇ ಇದೆ. ಆದರೆ ಈ ಕೆಲಸ ನಿಂತಿಲ್ಲ. ಮೃತಪಟ್ಟವರ ಅವಲಂಬಿತರ ಜೀವನಕ್ಕೆ ₹10 ಲಕ್ಷ, ₹12 ಲಕ್ಷ ನೀಡಲಾಗುತ್ತಿದೆ. ಸಫಾಯಿ ಕರ್ಮಾಚಾರಿಗಳ ಪರ ಹೋರಾಟಗಳನ್ನು ಹಮ್ಮಿಕೊಂಡೇ ಬಂದಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ಮಹಿಳಾ ಪೌರಕಾರ್ಮಿಕರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಊರಿನ ಕಸವನ್ನು ಗುಡಿಸುವವರ ಬದುಕು ಶೋಚನೀಯವಾಗಿದೆ. ಅವರನ್ನು ಸರ್ಕಾರ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವುದು ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಎಲ್ಲರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಂಡು ಗೌರವಯುತ ಜೀವನ ನಡೆಸಲು ಅವಕಾಶ ನೀಡಬೇಕು. ಇತ್ತೀಚೆಗೆ ಈ ವಿಚಾರದಲ್ಲಿ ಒಂದಷ್ಟು ಕೆಲಸಗಳಾಗಿರುವುದು ಖುಷಿಯ ವಿಚಾರ’ ಎಂದು ಹೇಳಿದರು.

ಹೋರಾಟ, ಸಾಹಿತ್ಯ, ರಂಗಭೂಮಿಯ ಅನುಭವಗಳನ್ನು ಹಂಚಿಕೊಂಡರು. ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಲವಂತರಾವ್ ಪಾಟೀಲ, ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ, ಸಾಹಿತಿ ಸುನಂದಮ್ಮ ಭಾಗವಹಿಸಿದ್ದರು.

ದಲಿತ ಮಹಿಳೆಯರು ಸಫಾಯಿ ಕರ್ಮಚಾರಿಗಳು ಮಹಿಳಾ ಪೌರಕಾರ್ಮಿಕರು ಗಾರ್ಮೆಂಟ್ಸ್ ಹೆಣ್ಣುಮಕ್ಕಳು ಸಾಧನಾ ಆರಾಧನಾ ಸಂಘದ ಮೂಲಕ ಲೈಂಗಿಕ ಕಾರ್ಯಕರ್ತೆಯರ ಪರ ಕೆಲಸ ಮಾಡಿದ್ದೇನೆ. ಅವರ ನೋವು– ನಲಿವುಗಳನ್ನು ನೋಡಿ ಕಲಿತದ್ದು ಸಾಕಷ್ಟಿದೆ. ಈ ಎಲ್ಲ ಬೋಧಿಸತ್ವಗಳ ಒಡನಾಟದಿಂದ ಮನುಷ್ಯಳಾಗಿ ರೂಪುಗೊಂಡಿದ್ದೇನೆ
ದು. ಸರಸ್ವತಿ ಸಾಮಾಜಿಕ ಕಾರ್ಯಕರ್ತೆ ರಂಗಭೂಮಿ ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.