ADVERTISEMENT

ಮಾರ್ಚ್‌ 7ಕ್ಕೆ 5ಕೆ ಸೇಫ್-ಎ-ಥಾನ್: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 14:35 IST
Last Updated 26 ಫೆಬ್ರುವರಿ 2026, 14:35 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ರಸ್ತೆ ಸುರಕ್ಷತೆಗಾಗಿ ಜನಜಾಗೃತಿ ಮೂಡಿಸಲು ಮಾರ್ಚ್‌ 7ರಂದು ನಗರದಲ್ಲಿ ‘5ಕೆ ಸೇಫ್-ಎ-ಥಾನ್’ ಕಾರ್ಯಕ್ರಮವನ್ನು ಸಾರಿಗೆ ಇಲಾಖೆ ಆಯೋಜಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪೊಲೀಸ್‌ ಇಲಾಖೆ ಹಾಗೂ ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ‘ನಮ್ಮ ರಸ್ತೆ - ನಮ್ಮ ಸುರಕ್ಷತೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ದೇಶದಲ್ಲಿ ವರ್ಷಕ್ಕೆ 1.70 ಲಕ್ಷ ಜನರು ಅಪಘಾತದಿಂದ ಮೃತರಾಗುತ್ತಿದ್ದಾರೆ. 4.70 ಲಕ್ಷ ಜನರು ಗಾಯಗೊಂಡು ಅಂಗವಿಕಲರಾಗುತ್ತಿದ್ದಾರೆ. ರಾಜ್ಯದಲ್ಲಿ ವರ್ಷಕ್ಕೆ ಅಪಘಾತದಲ್ಲಿ 11 ಸಾವಿರ ಜನರು ಸಾವಿಗೀಡಾಗುತ್ತಿದ್ದು, 25 ಸಾವಿರ ಜನರು ಅಂಗವೈಕಲ್ಯ ಹೊಂದುತ್ತಿದ್ದಾರೆ ಎಂದು ವಿವರಿಸಿದರು.

ADVERTISEMENT

ಅತಿವೇಗ, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಅಜಾಗರೂಕತೆಯಿಂದಾಗಿ ಅಪಘಾತಗಳು ಉಂಟಾಗುತ್ತಿವೆ. ಚಾಲಕರು ಜಾಗೃತಗೊಂಡರಷ್ಟೇ ಅಪಘಾತ ಕಡಿಮೆ ಮಾಡಲು ಸಾಧ್ಯ. ರಾಜ್ಯದಲ್ಲಿ 747 ‘ಬ್ಲ್ಯಾಕ್ ಸ್ಪಾಟ್‌’ಗಳನ್ನು ಗುರುತಿಸಲಾಗಿದ್ದು, ಅಪಘಾತ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಾರ್ಚ್‌ 7ರಂದು ಬೆಳಿಗ್ಗೆ 6ರಿಂದ 9 ಗಂಟೆವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ‘ಸೇಫ್‌ ಎ ಥಾನ್‌’ ನಡೆಯಲಿದೆ. ನಡಿಗೆ, ಸೈಕ್ಲಿಂಗ್ ಅಥವಾ ಓಟದ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಂಡು ಸುರಕ್ಷಿತ ಸಂಚಾರದ ಬಗ್ಗೆ ಪ್ರತಿಜ್ಞೆ ಮಾಡಬಹುದು. ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಆಸಕ್ತರು www.saferoadskarnataka.com ಜಾಲತಾಣದ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಾರಿಗೆ ಆಯುಕ್ತ ಎ.ಎಂ. ಯೋಗೀಶ್, ಹೆಚ್ಚುವರಿ ಆಯುಕ್ತರಾದ ಸಿ. ಮಲ್ಲಿಕಾರ್ಜುನ, ಬಿ.ಪಿ. ಉಮಾಶಂಕರ್‌, ಎಂ.ಪಿ. ಓಂಕಾರೇಶ್ವರಿ, ಪುರುಷೋತ್ತಮ, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ವಿಜಯಭಾಸ್ಕರನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.